ಬೆಳಗಾವಿ,ಡಿ.19- ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಯಂ ಮಾಡಲು ಅವಕಾಶವಿಲ್ಲ. ಆದರೆ ಶೇ.15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಉಡುಪಿ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎನ್‌ಎಚ್‌ಎಂ ಅಭಿಯಾನದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕವಾಗಿದ್ದು, ಅಭಿಯಾನ ಮುಕ್ತಾಯವಾದರೆ ನೇಮಕಾತಿಯೂ ಮುಕ್ತಾಯವಾಗಲಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಚಾರಿ ವರದಿ ಆಧರಿಸಿ ಪ್ರತಿ ವರ್ಷ ಶೇ.5 ರಷ್ಟು ವೇತನ ಹೆಚ್ಚಳ ಮಾಡಲಾಗುವುದು. ಎಪಿಎಲ್ ಪಡಿತರ ಚೀಟಿ ಹೊಂದಿದ್ದರೂ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಒದಗಿಸಲಾಗಿದೆ. ಒಂದು ವೇಳೆ ಮೃತಪಟ್ಟರೆ 10 ಲಕ್ಷ ರೂ. ಸಿಗುವ ವಿಮಾ ಸೌಲಭ್ಯಕ್ಕೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗಿದೆ. ಒಂದು ಬಾರಿ ವರ್ಗಾವಣೆಗೂ ಅವಕಾಶ ಕಲ್ಪಿಸಿದ್ದು, ನೇಮಕಾತಿ ಸಂದರ್ಭದಲ್ಲಿ ಶೇ.2 ರಷ್ಟು ಕೃಪಾಂಕ ನೀಡಲಾಗುವುದು. ಈ ಸಂಬಂಧ ಅತೀ ಶೀಘ್ರದಲ್ಲೇ ಆದೇಸ ಹೊರಡಿಸಲಾಗುವುದು ಎಂದು ಹೇಳಿದರು.
ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಆಯುಷ್ ವಿಭಾಗವನ್ನು ಪ್ರಾರಂಭಿಸುವ ಹೊಸ ಯೋಜನೆಯನ್ನು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಆದರೆ ಅನುದಾನ ಕೊರತೆ ಇದೆ. ಜಿಲ್ಲಾಸ್ಪತ್ರೆಯ ದುರಸ್ಥಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುದಾನ ಬಳಕೆಯಾಗಿದೆ.
ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ತಲಾ 10 ಹಾಸಿಗೆಗಳ ಸಾಮರ್ಥ್ಯವದ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಅನುದಾನದ ಅಭಾವವಿದ್ದು, ಸದ್ಯಕ್ಕೆ ಆಯುಷ್ ಆಸ್ಪತ್ರೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ಆಧರಿಸಿ ಈ ಆಸ್ಪತ್ರೆಒದಗಿಸುವ ಭರವಸೆ ನೀಡಿದರು.