ಬೆಂಗಳೂರು,ಜ.6- ನಗರದಲ್ಲಿ ಎಂಟು ತಿಂಗಳ ಮಗುವಿನಲ್ಲಿ ಶಂಕಿತ ಎಚ್‌ಎಂಪಿವಿ ವೈರಸ್ ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು,ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಬೆಂಗಳೂರಿನ ಉತ್ತರಭಾಗದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನಲ್ಲಿ ಶಂಕಿತ ವೈರಸ್ ಲಕ್ಷಣಗಳು ಕಂಡುಬಂದಿವೆ. ಪ್ರಯೋಗಾಲಯದ ವರದಿಯಲ್ಲೂ ಎಚ್‌ಎಂಪಿವಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮಗುವಿಗೆ ಯಾವುದೇ ಪ್ರವಾಸದ ಹಿನ್ನಲೆ ಇಲ್ಲ ಎಂಬುದು ಸಮಾಧಾನಕರ ವಿಚಾರವಾಗಿರುವುದರಿಂದ ದೃಢಪಟ್ಟಿರುವ ಸೋಂಕು ದೇಶೀಯ ತಳಿ ಎಂದು ಭಾವಿಸಲಾಗಿದೆ.
ಆದಾಗ್ಯೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸಚಿವ ದಿನೇಶ್‌ಗುಂಡೂರಾವ್ ಹೈ ಅಲರ್ಟ್ ಘೋಷಿಸಿದ್ದಾರೆ.ಚೀನಾದಲ್ಲಿ ರೂಪಾಂತರಿ ತಳಿಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ವೈರಸ್ ಚೀನಾ ಮೂಲದ್ದು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಸೋಂಕು ಎಂದು ಹೇಳಲಾಗುತ್ತಿದೆಯಾದರೂ ಆರಂಭದಲ್ಲಿ ಕೊರೋನ ಬಗ್ಗೆಯೂ ಇದೇ ರೀತಿಯ ಉಡಾಫೆ ವಾತಾವರಣ ಇತ್ತು. ಬಳಿಕ ಅದು ಭಾರೀ ಅನಾಹುತಗಳನ್ನು ಸೃಷ್ಟಿಸಿತ್ತು.
ಹೀಗಾಗಿ ಮೃದು ಸ್ವರೂಪಿ ಎಂದು ಭಾವಿಸಲಾಗಿದ್ದರೂ ಕೂಡ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆಯನ್ನು ಜಾಗೃತಗೊಳಿಸಲಾಗಿದೆ. ಪ್ರತಿಯೊಂದು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡುವುದು ಆಕ್ಸಿಜನ್ ಸಿಲಿಂಡರ್ ಹಾಗೂ ಜೀವನಾವಶ್ಯಕಗಳ ಲಭ್ಯತೆ ಕುರಿತು ಕ್ರಮ ಕೈಗೊಳ್ಳಬೇಕು. ತುರ್ತು ಔಷಧಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಗಳ ಬದಲಾಗಿ ಸ್ಥಳೀಯ ಮಟ್ಟದಲ್ಲಿನ ನಿಧಿಯನ್ನು ಬಳಸಿಕೊಳ್ಳಬೇಕು.
ಇದಕ್ಕೆ ಅಗತ್ಯವಾದ ಕರ್ನಾಟಕ ಪಾರದರ್ಶಕ ಕಾಯ್ದೆ ವಿನಾಯಿತಿ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.ಸೋಂಕಿನ ಬಗ್ಗೆ ಆತಂಕ ಅನಗತ್ಯ. ಇದು ಮಾರಣಾಂತಿಕವಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅದರ ಹೊರತಾಗಿಯೂ ನಿರ್ಲಕ್ಷ್ಯ ವಹಿಸಬಾರದು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆಯಲು ಯಾರೂ ಪ್ರಯತ್ನಿಸಬಾರದು. ಈ ಹಿಂದೆ ಕೋವಿಡ್ ಕಾಲಘಟ್ಟದಲ್ಲಿ ನಡೆದಿರುವ ಅಕ್ರಮಗಳು ಮರುಕಳಿಸಿದರೆ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಿದೆ.ಜನರ ಜೀವ ರಕ್ಷಣೆ ಹಾಗೂ ಆರೋಗ್ಯ ಸೇವೆಯಷ್ಟೇ ಮೂಲ ಉದ್ದೇಶವಾಗಬೇಕು. ಹಣ ಗಳಿಕೆಗೆ ಆದ್ಯತೆ ನೀಡುವ ಅಧಿಕಾರಿಗಳ ವಿರುದ್ಧ ಸರ್ಕಾರ ನಿರ್ದಯವಾಗಿ ವರ್ತಿಸಲಿದೆ ಎಂದು ಸಚಿವರು ಇದೇ ವೇಳೆ ಎಚ್ಚರಿಸಿದ್ದಾರೆ.