ಬೆಂಗಳೂರು,ಜೂ.10-ಮೇಲೈ ಸುಳಿಗಾಳಿಯಿಂದಾಗಿ ನೈರುತ್ಯ ಮುಂಗಾರು ಪ್ರಬಲವಾಗಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಆರ್ಭಟಿಸುತ್ತಿದೆ. ಉತ್ತರಕನ್ನಡ, ಬೆಳಗಾವಿ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಭಾರಿ ಮಳೆಯಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಐದು ದಿನಗಳ ಕಾಲ ಸರಾಸರಿ ಇದೇ ರೀತಿ ಮಳೆ ಮುಂದುವರೆಯಲಿದೆ.
ಕರಾವಳಿ, ಮಲೆನಾಡು ಹಾಗೂ ಉತ್ತರಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.ನಿನ್ನೆ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕೆರೆಕಟ್ಟೆಗೆ ನೀರು ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಮುನ್ನೆಚ್ಚರಿಕೆಯನ್ನು ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಜೂ.15 ರವರೆಗೂ ಮುಂಗಾರು ಪ್ರಬಲವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಇಲ್ಲವೇ ಅರೆವ್ಯಾಪಕ ಮಳೆಯಾಗಲಿದೆ. ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರಾ, ಕಾವೇರಿ, ಘಟಪ್ರಭಾ ಸೇರಿದಂತೆ ಪ್ರಮುಖ ನದಿಗಳ ಒಳಹರಿವು ಹೆಚ್ಚಾಗುತ್ತಿದೆ.
ಕೇರಳದಲ್ಲೂ ಉತ್ತಮ ಮಳೆಯಾಗಿರುವುದಿರಂದ ಕಾವೇರಿ ನದಿಪಾತ್ರದ ಜಿಲ್ಲೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆ ಈ ಬಾರಿ ಮುಂಗಾರು ಆರಂಭದಿಂದಲೇ ಆರ್ಭಟಿಸುತ್ತಿದೆ. ಆದರೆ ಕಳೆದ ವರ್ಷ ಆರಂಭದಲ್ಲೇ ಮುಂಗಾರು ಕೈಕೊಟ್ಟು ಬರದ ಕರಾಳ ಛಾಯೆ ಆವರಿಸಿತ್ತು.
ಈ ಬಾರಿ ಅವಧಿಗೂ ಮುನ್ನ ಮುಂಗಾರು ಆರಂಭವಾಗಿದ್ದು, ಆರಂಭದಿಂದಲೇ ಉತ್ತಮ ಮಳೆಯಾಗುತ್ತಿರುವು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳಲು ಅನುಕೂಲಕರವಾಗಿದೆ. ಅಲ್ಲದೆ, ಕೆರೆಕಟ್ಟೆ, ನದಿಗಳನ್ನು ನೀರು ಬರುತ್ತಿರುವುದು ಮತ್ತಷ್ಟು ಸಮಾಧಾನ ತಂದಂತಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ಈ ಬಾರಿ ವಾಡಿಕೆ ಪ್ರಮಾಣದ ಮಳೆಯಾಗಲಿದೆ. ಅದಕ್ಕೆ ಪೂರಕವಾಗಿ ಕಳೆದ 2 ವಾರಗಳಿಂದಲೂ ರಾಜ್ಯಾದ್ಯಂತೆ ಉತ್ತಮ ಮಳೆಯಾಗುತ್ತಿದೆ.