ಬೆಂಗಳೂರು, ಆ.28- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲುಬ್ಬರ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.ನಾಳೆಯಿಂದ ರಾಜ್ಯದ ಒಳನಾಡಿನಲ್ಲಿ ಮಳೆ ಹೆಚ್ಚಾಗುವ ಮುನ್ಸೂಚನೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಉಳಿದಂತೆ ರಾಜ್ಯದ ಹಲವೆಡೆ ಹಗುರ ಮಳೆ ಬಿದ್ದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗುವುದಿಲ್ಲ. ಇದರ ಪ್ರಭಾವದಿಂದ ಮೋಡ ಹೆಚ್ಚಾಗಲಿದ್ದು, ಆಗಸ್ಟ್ ತಿಂಗಳ ಅಂತ್ಯದವರೆಗೂ ಮಳೆಯಾಗುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಆಗಾಗ್ಗೆ ಬಲವಾದ ಮೇಲೈ ಗಾಳಿ ಬೀಸಲಿದೆ. ಕೆಲವೆಡೆ ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕೇರಳ ಕರಾವಳಿಯಿಂದ ಮಹಾರಾಷ್ಟ್ರದವರೆಗೂ ಅರಬ್ಬೀ ಸಮುದ್ರದಲ್ಲಿ ಸಮುದ್ರದ ಮೇಲುಬ್ಬರ(ಟ್ರಫ್) ಉಂಟಾಗಿದೆ. ಅಲ್ಲದೆ, ಗುಜರಾತ್ ಕರಾವಳಿಯ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಎರಡೂ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ವಿರಳ.
ವಾತಾವರಣದಲ್ಲಿ ಉಂಟಾಗಿರುವ ಈ ರೀತಿಯ ಬದಲಾವಣೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಆದರೆ, ಒಳನಾಡಿನಲ್ಲಿ ಸಾಧಾರಣ ಮಳೆ ನಿರೀಕ್ಷಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮಲೆನಾಡು ಭಾಗದ ಕೆಲವೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದಿಂದ 39 ಸಾವಿರ ಕ್ಯುಸೆಕ್‌್ಸಗೂ ಹೆಚ್ಚು ನೀರನ್ನು ಶರಾವತಿ ನದಿಗೆ ಬಿಡಲಾಗುತ್ತಿದೆ. ಒಳಹರಿವು 22 ಸಾವಿರ ಕ್ಯುಸೆಕ್‌್ಸನಷ್ಟಿದೆ. 151.75 ಟಿಎಂಸಿ ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಪ್ರಸ್ತುತ 145.75 ಟಿಎಂಸಿ ನೀರಿದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.
ಅದೇ ರೀತಿ ಸೂಪ ಜಲಾಶಯವು ಶೇ.89 ರಷ್ಟು ಭರ್ತಿಯಾಗಿದ್ದು, ಕಾಳಿನದಿಗೆ 8 ಸಾವಿರ ಕ್ಯುಸೆಕ್್ಸಗೂ ಹೆಚ್ಚಿನ ನೀರು ಬಿಡಲಾಗುತ್ತಿದೆ. 23 ಸಾವಿರ ಕ್ಯುಸೆಕ್್ಸಗೂ ಹೆಚ್ಚಿನ ಒಳಹರಿವು ಇದೆ. ಜಲಾನಯನ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಭರ್ತಿಯಾಗುವ ಸಾಧ್ಯತೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.