Tuesday, August 26, 2025
Homeರಾಷ್ಟ್ರೀಯ | Nationalಶುಕ್ರವಾರದಿಂದ ಭಾನುವಾರದವರೆಗೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಶುಕ್ರವಾರದಿಂದ ಭಾನುವಾರದವರೆಗೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು,ಮೇ 14- ಕಳೆದ ಎಂಟು ಹತ್ತು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ 5 ದಿನಗಳ ಕಾಲ ಮುಂದುವರೆಯಲಿದೆ. ಶುಕ್ರವಾರದಿಂದ ಭಾನುವಾರದವರೆಗೆ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಗಳಿವೆ.ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಅದರ ಪರಿಣಾಮ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಕರಾವಳಿ ಹಾಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್‌‍.ಪ್ರಕಾಶ್‌ ತಿಳಿಸಿದರು.

ಮುಂಗಾರುಪೂರ್ವ ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಆಗುತ್ತಿದೆ. ಇದೇ ರೀತಿ ಇನ್ನೂ ಮೂರು ದಿನ ಮುಂದುವರೆಯಲಿದೆ. ಆದರೆ ಶುಕ್ರವಾರದ ನಂತರ ಮಳೆ ಹೆಚ್ಚಾಗಲಿದೆ ಎಂದರು.

ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಲವು ಕಡೆ ಮಳೆಯಾಗಲಿದೆ. ಕೆಲವೆಡೆ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ನಿನ್ನೆ ಕೂಡ ಬೆಂಗಳೂರು, ಮೈಸೂರು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಯಾದಗಿರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮಾ.1 ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಶೇ. 40 ರಷ್ಟು ಮಳೆ ಕೊರತೆಯಾಗಿರುವುದು ಕಂಡುಬಂದಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 86.2 ಮಿಲಿ ಮೀಟರ್‌ ಆಗಿದ್ದು, ಕೇವಲ 51.5 ಮಿಲಿ ಮೀಟರ್‌ ಮಾತ್ರ ಮಳೆಯಾಗಿದೆ.

ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮೇ ತಿಂಗಳಿನಲ್ಲಿ ಮಳೆ ಪ್ರಾರಂಭವಾಗಿದ್ದರೂ ವ್ಯಾಪಕವಾಗಿ ಎಲ್ಲಾ ಕಡೆ ಮಳೆಯಾಗಿಲ್ಲ. ಒಂದು ಕಡೆ ಉತ್ತಮ ಮಳೆಯಾಗಿದ್ದರೆ, ಮತ್ತೊಂದು ಕಡೆ ಹಗುರ ಹಾಗೂ ಸಾಧಾರಣ ಮಳೆಯಾಗಿದೆ. ಇನ್ನೂ ಕೆಲವೆಡೆ ಮಳೆಯೇ ಆಗಿಲ್ಲ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ಕಂಡುಬರುತ್ತಿದೆ. ಕೆಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.

ಇದರಿಂದ ಮರ, ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಬಾಳೆ, ಮಾವು ಸೇರಿದಂತೆ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಒಟ್ಟಾರೆ ಬರದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಬೇಸಿಗೆ ಮಳೆ ತಂಪೆರೆಯುವುದರ ಜೊತೆಗೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವಂತೆ ಮಾಡಿದೆ.

RELATED ARTICLES

Latest News