Tuesday, September 17, 2024
Homeಬೆಂಗಳೂರುರಾತ್ರಿ ಮಳೆಗೆ ರಾಜಧಾನಿ ಬೆಂಗಳೂರು ತಲ್ಲಣ, ಎಲ್ಲೆಲ್ಲೆ ಏನೇನಾಯ್ತು..? ಇಲ್ಲಿದೆ ರಿಪೋರ್ಟ್

ರಾತ್ರಿ ಮಳೆಗೆ ರಾಜಧಾನಿ ಬೆಂಗಳೂರು ತಲ್ಲಣ, ಎಲ್ಲೆಲ್ಲೆ ಏನೇನಾಯ್ತು..? ಇಲ್ಲಿದೆ ರಿಪೋರ್ಟ್

ಬೆಂಗಳೂರು,ಆ.12- ತಡರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ತತ್ತರಿಸಿಹೋಗಿದೆ. ಇಂದು ಬೆಳಿಗ್ಗೆ ರಸ್ತೆ ಬದಿಯ ಮರ ಉರುಳಿಬಿದ್ದು ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಬಹುತೇಕ ರಸ್ತೆಗಳು ನದಿಗಳಂತೆ ಪರಿವರ್ತನೆಯಾಗಿದ್ದು, ಕೆ.ಆರ್‌.ಮಾರುಕಟ್ಟೆ ಸಂಪೂರ್ಣ ಜಲಮಯವಾಗಿದೆ.

ರಾತ್ರಿಯಿಡಿ ಸುರಿದ ಮಳೆಗೆ ಮಾರುತಿ ಸೇವಾನಗರದಲ್ಲಿ ಇಂದು ಮುಂಜಾನೆ ಭಾರಿ ಮರವೊಂದು ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಮೇಲೆ ಉರುಳಿಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬ ವ್ಯಕ್ತಿಯ ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಒರ್ವ ಮಹಿಳೆಯ ಕಾಲು ಮುರಿದಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ಸುಬ್ಬಯನ ಪಾಳ್ಯದಲ್ಲಿ ವಾಸವಾಗಿದ್ದ ವಿಶಾಲಾಕ್ಷಿ, ಶಾಂತಕುಮಾರ್‌ ದಂಪತಿ ಹಾಗೂ ಅವರ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಮಕ್ಕಳು ಹಲಸೂರಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಣಿತ ಮತ್ತು ಪ್ರಣತಿ ಶ್ರಿ ಎಂದು ಗುರುತಿಸಲಾಗಿದೆ.

ಹೂವಿನ ಮಂಡಿ ಮುಳುಗಡೆ: ನಿನ್ನೆ ರಾತ್ರಿ 2 ಗಂಟೆಗೆ ಶುರುವಾದ ಮಳೆ ಮುಂಜಾನೆವರೆಗೂ ಅಬ್ಬರಿಸಿ ಬೊಬ್ಬಿರಿದಿದೆ. ಅದರಲ್ಲೂ ಮಾರುಕಟ್ಟೆಯ ಹೂವಿನ ಮಂಡಿ ನೀರಿನಲ್ಲಿ ಮುಳುಗಿ ಹೋಗಿದ್ದು, ಹೂವುಗಳು ಕೆರೆಯಂತೆ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಬೆಳಿಗ್ಗೆ ಹೂವಿನ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಹೊಳೆಯಂತಾದ ರಸ್ತೆಗಳು:
ಎಲ್ಲೆಲ್ಲೂ ನೀರು ನಿಂತಿರುವುದರಿಂದ ರಸ್ತೆಗಳು ಹೊಳೆಯಂತಾಗಿದ್ದು, ಅಂಡರ್‌ ಪಾಸ್‌ಗಳು ಜಲಾವೃತಗೊಂಡಿವೆ. ವಾಹನ ಸವಾರರು ಪರದಾಡುವಂತಾಗಿದೆ. ಚಿಕ್ಕಪೇಟೆ ಮೆಟೋ ಸ್ಟೇಷನ್‌ ಮುಂಭಾಗದ ರಸ್ತೆ ಮುಳುಗಡೆಯಾಗಿದ್ದು, ಸುಮಾರು 2 ಅಡಿಯಷ್ಟು ನೀರು ನಿಂತಿದೆ.

ಒಕಳಿಪುರಂನ ಅಂಡರ್‌ಪಾಸ್‌ಗೆ ನೀರು ನುಗ್ಗಿ, ವಾಹನ ಸವಾರರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ನೀರು ನಿಂತಿದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು. ಅದೃಷ್ಟವಶಾತ್‌ ಆ್ಯಂಬುಲೆನ್‌್ಸನಲ್ಲಿ ಪೇಷೆಂಟ್‌ ಇಲ್ಲದಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ.

ಅದೇ ರೀತಿ ಜಯದೇವ ಅಂಡರ್‌ಪಾಸ್‌ನಲ್ಲಿ ಆಳುದ್ದ ನಿಂತಿದ್ದ ನೀರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಹೊರ ಹಾಕಿದರು. ಹೀಗಾಗಿ ಬನ್ನೇರುಘಟಕ್ಕೆ ಹೋಗುವ ರಸ್ತೆ ಸಂಪೂರ್ಣ ಜಾಮ್‌ ಆಗಿತ್ತು. ಅದಲ್ಲದೆ, ನಗರದ ಬಹುತೇಕ ಕೆಳಸೇತುವೆಗಳಲ್ಲೂ ಇದೇ ಪರಿಸ್ಥಿತಿ ಕಂಡಬಂದಿದೆ.

ಚಿಕ್ಕಪೇಟೆ ಮೆಟೋ ಸ್ಟೇಷನ್‌ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ಆವರಿಸಿತ್ತು. ಗುಂಡಿಗಳು ಯಾವುದೋ, ರಸ್ತೆಯಾವುದೇ ಒಂದು ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಪರದಾಟ:
ರಾತೋರಾತ್ರಿ ಸುರಿದ ದಿಢೀರ್‌ ಮಳೆಗೆ ಮನೆಯಿಂದ ಹೊರಬಂದವರು ನಲುಗಿ ಹೋಗಿದ್ದಾರೆ. ಮೆಜೆಸ್ಟಿಕ್‌, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್‌ ಸರ್ಕಲ್‌‍, ಟೌನ್‌ಹಾಲ್‌‍, ಜಯನಗರ ಸೇರಿ ಹಲವೆಡೆ ನೂರಾರು ಅವಾಂತರಗಳನ್ನು ಸೃಷ್ಟಿಯಾಗಿತ್ತು..

ಸಿಲ್ಕ್‌‍ ಬೋರ್ಡ್‌ ಜಂಕ್ಷನ್‌ ರಸ್ತೆ ನೀರಿನಲ್ಲಿ ಮುಳುಗಿ ಹೋಗಿದ್ದರಿಂದ ಸುಮಾರು ಒಂದು ಕಿ.ಮೀ ವರೆಗೆ ಟ್ರಾಫಿಕ್‌ ಜಾಮ್‌ ಆಗಿತ್ತು. ಹೊಸರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಸವಾರರು ಪರದಾಡುತ್ತ ಮುಂದೆ ಸಾಗುವಂತಾಗಿದೆ.

ವರ್ತೂರಿನ ಬಳಗೆರೆ ಮುಖ್ಯರಸ್ತೆ ನದಿಯಂತಾಗಿತ್ತು. ದೂರದಿಂದ ನೋಡಿದರೆ ಅಲ್ಲಿ ರಸ್ತೆ ಇತ್ತು ಎನ್ನುವ ಯಾವ ಕುರುಹುಗಳು ಕಾಣಿಸುತ್ತಿಲ್ಲ. ಹಿಂದಿನಿಂದಲೂ ಅಲ್ಲಿ ನದಿ ಇತ್ತು ಎನ್ನುವಂತೆ ಕಾಣುತ್ತಿರುವುದು ವಿಶೇಷವಾಗಿದೆ.

ಧರೆಗುರುಳಿದ ಮರಗಳು :
ಕುಮಾರ ಕೃಪ ವೆಸ್ಟ್ ಸಮೀಪದ ಸುಬ್ರಮಣ್ಯ ದೇವಸ್ಥಾನದ ಬಳಿ ಕಾರಿನ ಮೇಲೆ ಉರುಳಿಬಿದ್ದು ಕಾರು ಜಖಂಗೊಂಡಿದೆ.ತಕ್ಷಣ ಸ್ಥಳಕ್ಕೆ ದೌಡಾಯಿಸಿರುವ ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿಗಳು ಮರ ತೆರವು ಮಾಡಿದ್ದಾರೆ.ಇನ್ನು ಸದಾಶಿವನಗರದಲ್ಲಿ ಭಾರಿ ಮರವೊಂದು ಬುಡ ಸಮೇತ ಕುಸಿದುಬಿದ್ದಿದೆ. ಮಾತ್ರವಲ್ಲದೆ, ನಗರದ ಇನ್ನಿತರ ಹಲವಾರು ಪ್ರದೇಶಗಳಲ್ಲೂ ಹತ್ತಾರು ಮರಗಳು ಬುಡಮೇಲಾಗಿವೆ.

ಮನೆಗಳಿಗೆ ನುಗ್ಗಿದ ನೀರು:
ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇ ಔಟ್‌ ನಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು.ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮನೆ ಸಾಮಗ್ರಿಗಳನ್ನ ರಕ್ಷಿಸಿಕೊಳ್ಳಲು ಜನರ ಪರದಾಡುವಂತಾಯಿತು. ಇದರ ಜೊತೆಗೆ ಏರಿಯಾದ ರಸ್ತೆಗಳೆಲ್ಲಾ ಕೆಸರುಗದ್ದೆಗಳಂತೆ ಆಗಿತ್ತು.

ಪುಲಿಕೇಶಿನಗರದ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರುನುಗ್ಗಿದೆ. ಅಲ್ಲಿನ ಎನ್‌ ಸಿ ಕಾಲೋನಿಯಲ್ಲಿ ಮನೆಗಳು ಜಲಾವೃತಗೊಂಡಿದ್ದು ಜನ ಪರದಾಡುತ್ತಿದ್ದಾರೆ. ಮಳೆ ಬಂದಾಗಲೇಲ್ಲ ಇಲ್ಲಿ ಇದೇ ಪರಿಸ್ಥಿತಿ ಇದೇ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳುವುದು ಎನ್ನುವ ಚಿಂತೆ ನಮ್ಮನ್ನು ಕಾಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾತ್‌ಹಳ್ಳಿ ಬಳಿ ಅಪಾರ್ಟ್‌ಮೆಂಟ್‌ ಗೆ ಜಲದಿಗ್ಬಂಧನ ಹಾಕಲಾಗಿದೆ. ಭಾರಿ ಮಳೆಗೆ ಅಪಾರ್ಟ್ಮೆಂಟ್‌ ಬೇಸ್‌ ಮೆಂಟ್‌ ಗೆ ನುಗ್ಗಿದ ನೀರಿನಿಂದ ಜನ ಹೊರಬರಲಾರದೆ ಪರದಾಡುತ್ತಿದ್ದಾರೆ.ನಿನ್ನೆ ಸುರಿದ ಮಳೆಗೆ ಯಲಹಂಕದ ಅಪಾರ್ಟ್‌ಮೆಂಟ್‌ ಒಂದಕ್ಕೆ ರಾಜಕಾಲುವೆ ನೀರು ನುಗ್ಗಿದೆ. ರಮಣಶ್ರೀ ಕ್ಯಾಲಿಫೋರ್ನಿಯಾ ಗಾರ್ಡನ್‌ ಯಲಹಂಕದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ.ಕಳೆದ ಬಾರಿ ಯಲಹಂಕ ನಾರ್ಥ್‌ ವುಡ್‌ ವಿಲ್ಲಾಗಳಿಗೆ ನೀರು ನುಗ್ಗಿತ್ತು. ಈಗ ಮತ್ತದೇ ಕಾಲುವೆಯಿಂದ ಸಂಕಷ್ಟ ಎದುರಾಗಿದೆ.

ಹೆಬ್ಬಾಳ ರಸ್ತೆ ಜಾಮ್‌:
ಮಳೆಯಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ ಮೇಲ್ಸೇತುವೆ ಸಂಪೂರ್ಣ ಜಾಮ್‌ ಆಗಿತ್ತು. ಹೀಗಾಗಿ ಆ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ವಾಹನಗಳು ನಿಂತಿದ್ದ ದೃಶ್ಯಗಳು ಕಂಡುಬಂತು.

ಕಾಲ್ನಡಿಗೆಯಲ್ಲೇ ಕಚೇರಿಗೆ :
ನಗರದ ಬಹುತೇಕ ಅಂಡರ್‌ಪಾಸ್‌ಗಳು ಹಾಗೂ ರಸ್ತೆಗಳು ಜಲಾವೃತಗೊಂಡಿರುವುದರಿಂದ ಹಲವಾರು ಪ್ರದೇಶಗಳಲ್ಲಿ ಜನ ತಮ್ಮ ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಕಚೇರಿಗೆ ತೆರಳುತ್ತಿದ್ದಾರೆ.
ರಸ್ತೆಯಲ್ಲಿ ಮೀನುಗಳು; ಸಿಲ್ಕ್ ಬೋರ್ಡ್‌ ಜಂಕ್ಷನ್‌ ಸಮೀಪದ ರಸ್ತೆಗಳು ಕೆರೆಯಂತಾಗಿದ್ದು ರಸ್ತೆಯಲ್ಲೇ ಮೀನುಗಳು ಕಾಣಿಸಿಕೊಂಡವು. ಆ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಬ್ಬರು ರಸ್ತೆಯಲ್ಲೇ ಮೀನು ಹಿಡಿಯುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಮ್ಯಾನ್‌ ಹೋಲ್‌ ಗೆ ಬಿದ್ದ ಕಾರುಗಳು:

ರಸ್ತೆ ತುಂಬಾ ಮಳೆ ನೀರು ನಿಂತಿದ್ದರಿಂದ ಸಿಲ್‌್ಕ ಬೋರ್ಡ್‌ ಜಂಕ್ಷನ್‌ ಬಳಿ ಎರಡು ಕಾರುಗಳು ರಸ್ತೆ ಬದಿಯ ಮ್ಯಾನ್‌ಹೋಲ್‌ಗೆ ಬಿದ್ದಿರುವ ಘಟನೆ ನಡೆದಿದೆ.ಮ್ಯಾನ್‌ಹೋಲ್‌ ಕಳೆದ ಹಲವಾರು ದಿನಗಳಿಂದ ಓಪನ್‌ ಆಗಿತ್ತು ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಉಕ್ಕಿಹರಿಯುತ್ತಿದ್ದ ಮ್ಯಾನ್‌ಹೋಲ್‌ ಕಾಣದೆ ಇಬ್ಬರು ಕಾರು ಚಾಲಕರು ಅದರ ಮೇಲೆ ವಾಹನ ಚಲಾಯಿಸಿದ್ದರಿಂದ ಇಂತಹ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ಎರಡು ಕಾರುಗಳ ಚಾಲಕರನ್ನು ರಕ್ಷಣೆ ಮಾಡಿದ್ದಾರೆ.

ನಗರದಲ್ಲಿ ಎಲ್ಲೆಲ್ಲಿ ಎಷ್ಟು ಮಳೆ:
ಕೊಡಿಗೇಹಳ್ಳಿ – 61 ಮಿಮೀ
ವಿವಿಪುರಂ – 57 ಮಿಮೀ
ವಿದ್ಯಾಪೀಠ – 56 ಮಿಮೀ
ಹಗದೂರು – 54 ಮಿಮೀ
ಯಲಹಂಕ – 51 ಮಿಮೀ
ಆರ್‌.ಆರ್‌ ನಗರ – 50 ಮಿಮೀ
ವಿ ನಾಗೇನಹಳ್ಳಿ – 50 ಮಿಮೀ
ಪುಲಿಕೇಶಿ ನಗರ – 49 ಮಿಮೀ
ಅರೆಕರೆ – 48 ಮಿಮೀ
ಹೆಚ್‌ಎಸ್‌ಆರ್‌ ಲೇಔಟ್‌ -45 ಮಿಮೀ
ನಾಗಪುರ – 44 ಮಿಮೀ
ಕಾಟನ್‌ ಪೇಟೆ – 43 ಮಿಮೀ
ಚಾಮರಾಜಪೇಟೆ – 43 ಮಿಮೀ
ಬಿಟಿಎಂ ಲೇಔಟ್‌ – 41 ಮಿಮಿ
ಹೂಡಿ – 40 ಮಿಮೀ

RELATED ARTICLES

Latest News