Friday, February 7, 2025
Homeಬೆಂಗಳೂರುಏರ್ ಶೋ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಭಾರೀ ವಾಹನಗಳ ನಿಷೇಧ

ಏರ್ ಶೋ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಭಾರೀ ವಾಹನಗಳ ನಿಷೇಧ

Heavy vehicles banned on Bellary Road in wake of air show

ಬೆಂಗಳೂರು,ಫೆ.7– ಯಲಹಂಕ ವಾಹಿನಿಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ-2025 ಕ್ಕೆ ಗಣ್ಯರಿಗೆ ಹಾಗೂ ಏರ್ ಶೋ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಬಳ್ಳಾರಿ ರಸ್ತೆಯಲ್ಲಿ ಪ್ರಮುಖವಾಗಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪ್ರದರ್ಶನ ನಡೆಯುವ ನಾಲ್ಕು ದಿನಗಳು ಏರ್ಪೋರ್ಟ್ಗೆ ಹೋಗುವವರು ಕೂಡ ಬಾಗಲೂರು ಮಾರ್ಗದ ರಸ್ತೆಯನ್ನು ಉಪಯೋಗಿಸುವಂತೆ ನಗರ ಪೊಲೀಸ್ ಆಯುಕ್ತ ದಯಾನಂದ ಮನವಿ ಮಾಡಿದ್ದಾರೆ.

ಫೆ.10ರಿಂದ 14 ರವರೆಗೆ ನಡೆಯಲಿದ್ದು, ಕೊನೆಯ ಎರಡು ದಿನ ಸಾರ್ವಜನಿಕರಿಗೆ ಏರ್ ಶೋ ವೀಕ್ಷಿಸಲು ನಿಗಧಿತ ಪ್ರದೇಶಗಳನ್ನು ಸಜ್ಜುಗೊಳಿಸಲಾಗಿದ್ದು ಇನ್ನು ಹೆಚ್ಚಾಗಿ ಬಿಎಂಟಿಸಿ ಬಸ್ಗಳನ್ನು ಬಳಸುವಂತೆ ತಿಳಿಸಲಾಗಿದೆ. ಇದಕ್ಕಾಗಿಯೇ ಭಾರತೀಯ ವಾಯುಪಡೆಯಿಂದ 500 ಕ್ಕೂ ಹೆಚ್ಚು ಬಸ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ.

ಸ್ವಂತ ವಾಹನದಲ್ಲಿ ಬರುವವರು ಉಚಿತವಾಗಿ ಜಿಕೆವಿಕೆ ಪಾರ್ಕಿಂಗ್ ಸ್ಥಳದಿಂದ ಅಡ್ವಾ ಪಾರ್ಕಿಂಗ್ ಏರ್ ಡಿಸ್ಪ್ಲೆ ವ್ಯೂ ಏರಿಯಾ, ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಹಾಗೂ ವಾಪಸ್ ಜಿಕೆವಿಕೆ ಪಾರ್ಕಿಂಗ್ ಸ್ಥಳಕ್ಕೆ ಬರಲು ಬಿಎಂಟಿಸಿ ವತಿಯಿಂದ ಉಚಿತ ಎ.ಸಿ. ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಏರ್ ಡಿಸ್ಪ್ಲೆ ವೀಕ್ಷಣೆಗೆ ಗೇಟ್ 8 ಮತ್ತು 9 ರ ಮುಖಾಂತರ ಪ್ರವೇಶ ಮಾಡಬೇಕು. ಡೊಮೆಸ್ಟಿಕ್ ಪಾರ್ಕಿಂಗ್ಗೆ ಗೇಟ್ ನಂ 5 ರ ಮುಖಾಂತರ ಪ್ರವೇಶ ಮಾಡಬೇಕು. ಇದರ ವೀಕ್ಷಣೆಗೆ ನೀಡಿರುವ ಟಿಕೆಟ್ ಮತ್ತು ಪಾಸ್ಗಳಿಗೆ ಕ್ಯೂ ಆರ್ ಕ್ಯೂಡ್ ನಮೂದಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ನೋಡಿದಾಗ ತಮಗೆ ನಿಗದಿ ಪಡಿಸಿರುವ ಸ್ಥಳವನ್ನು ಪರಿಶೀಲಿಸಬಹುದಾಗಿದೆ.

ಅಡ್ವಾ ಪಾರ್ಕಿಂಗ್ ಕಡೆಗೆ ಬರುವವರು ಕೆ.ಆರ್.ಪುರ- ನಾಗವಾರ ಜಂಕ್ಷನ್-ಬಲತಿರುವು-ಥಣಿಸಂದ್ರ-ನಾರಾಯಣಪುರ ಕ್ರಾಸ್-ಎಡತಿರುವು-ಟೆಲಿಕಾಂ ಲೇ ಔಟ್-ಜಕ್ಕೂರು ಕ್ರಾಸ್-ಬಲ ತಿರುವು-ಯಲಹಂಕ ಬೈಪಾಸ್-ಯಲಹಂಕ ಕಾಫಿ ಡೇ- ಪಾಲನಹಳ್ಳಿ ಗೇಟ್ ಸರ್ವಿಸ್ ರಸ್ತೆ (ಗ್ರೀಲ್ ಓಪನ್) ಫೋರ್ಡ್ ಷೋ ರೂಂ-ಎಡತಿರುವು- ನಿಟ್ಟೇ ಮೀನಾಕ್ಷಿ ಕಾಲೇಜ್ ರಸ್ತೆಯನ್ನು ಬಳಸಬಹುದಾಗಿದೆ.

ಇದೇ ರೀತಿ ನಾಲ್ಕು ದಿಕ್ಕುಗಳಿಂದಲೂ ಬರುವವರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಕೆ.ಆರ್.ಪುರಂ ಹೆಣ್ಣೂರು ಕ್ರಾಸ್, ಕೊತ್ತನೂರು ಗುಬ್ಬಿ ಕ್ರಾಸ್-ಕಣ್ಣೂರು-ಬಾಗಲೂರು- ಮೈಲನಹಳ್ಳಿ-ಬೇಗೂರು ಮೂಲಕ ವಿಮಾನನಿಲ್ದಾಣದ ನೈರುತ್ಯ ಪ್ರವೇಶ ದ್ವಾರವನ್ನು ಪ್ರವೇಶಿಸಬಹುದು.
ಗೊರಗುಂಟೆಪಾಳ್ಯ ಮಾರ್ಗವಾಗಿ ಬರುವವರು ಎಂ.ಎಸ್.ಪಾಳ್ಯ ಜಂಕ್ಷನ್-ಮುನಿಕೃಷ್ಣ ಜಂಕ್ಷನ್-ರಾಜನಕುಂಟೆ-ಎಂವಿಟಿ ಕ್ರಾಸ್ ಮೂಲಕ ವಿಮಾನನಿಲ್ದಾಣ ತಲುಪಬಹುದು.

ಮೈಸೂರು ರಸ್ತೆಯಿಂದ ಬರುವವರು ನಾಯಂಡಹಳ್ಳಿ-ಚಂದ್ರಾಲೇಔಟ್,ಗೊರಗುಂಟೆಪಾಳ್ಯ- ಬಿ.ಎಲ್.ವೃತ್ತದ ಮೂಲಕ ರಾಜನಕುಂಟೆಗೆ ಬಂದು ವಿದ್ಯಾನಗರ ಎಂವಿಐಟಿ ಕ್ರಾಸ್ ಬಳಿ ವಿಮಾನನಿಲ್ದಾಣ ತಲುಪಬಹುದಾಗಿದೆ.ಲಾರಿ-ಟ್ರಕ್ಗಳು, ಖಾಸಗಿ ಬಸ್ಗಳನ್ನು ಬೆಂಗಳೂರು-ಬಳ್ಳಾರಿ ರಸ್ತೆಯಲ್ಲಿ ಮೇಕ್ರಿ ವೃತ್ತದಿಂದ ಎಂವಿಐಟಿ ಕ್ರಾಸ್ವರೆಗೂ ನಿಷೇಧಿಸಲಾಗಿದೆ.

ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್ ರಸ್ತೆಯ ಎರಡೂ ದಿಕ್ಕಿನಲ್ಲೂ ಸಂಚರಿಸುವಂತಿಲ್ಲ. ಅದೇ ರೀತಿ ನಾಗವಾರ, ತಣಿಸಂದ್ರ ಮುಖ್ಯ ರಸ್ತೆ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್ ಮತ್ತು ಹೆಸರುಘಟ್ಟ ಮತ್ತು ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ಬರುವಂತಹ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ರಸ್ತೆಗಳಲ್ಲಿ ವಾಹನ ನಿಲುಗಡೆಗೂ ನಿಷೇಧ ಹೇರಲಾಗಿದೆ.

ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಅಂತಾರಾಷ್ಟ್ರೀಯ ಏರೋ ಇಂಡಿಯಾ ಪ್ರದರ್ಶನಕ್ಕೆ ಯಾವುದೇ ವಾಹನ ದಟ್ಟಣೆ ಉಂಟಾಗದಂತೆ ಬೆಂಗಳೂರು ಪೊಲೀಸರು ಕೈಗೊಂಡಿರುವ ಯೋಜನೆಗೆ ಕೈಜೋಡಿಸಬೇಕೆಂದು ಆಯುಕ್ತರು ಮನವಿ ಮಾಡಿದ್ದಾರೆ.

RELATED ARTICLES

Latest News