Sunday, May 5, 2024
Homeರಾಜ್ಯಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಸಮ್ಮತಿ : ಡಿಕೆಶಿ ಸದ್ಯನಿರಾಳ

ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಸಮ್ಮತಿ : ಡಿಕೆಶಿ ಸದ್ಯನಿರಾಳ

ಬೆಂಗಳೂರು,ನ.29- ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಹಿಂಪಡೆದ ಕಾರಣ, ತಮ್ಮ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುವುದನ್ನು ಪ್ರಶ್ನಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಮತ್ತು ಮೇಲ್ಮನವಿಯನ್ನು ಹಿಂಪಡೆಯಲು ಹೈಕೋರ್ಟ್ ಅನುಮತಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಕಾನೂನು ಹೋರಾಟದಲ್ಲಿ ಡಿ.ಕೆ.ಶಿವಕುಮಾರ್ಗೆ ತಾತ್ಕಲಿಕ ಜಯ ಸಿಕ್ಕಿದ್ದು, ಸಿಬಿಐನ ಮುಂದಿನ ನಡೆಯ ಮೇಲೆ ಪ್ರಕರಣದ ಭವಿಷ್ಯ ನಿಂತಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ, ಸಲ್ಲಿಸಿದ್ದ ಮೇಲ್ಮನವಿ ಹಾಗೂ ರಿಟ್ ಅನ್ನು ಡಿಕೆಶಿ ವಾಪಸ್ ಪಡೆದಿದ್ದಾರೆ. ಏತನ್ಮಧ್ಯೆ ಸಿಬಿಐ ಅನುಮತಿ ವಾಪಸ್ ಪಡೆದ ಸರ್ಕಾರದ ಕ್ರಮ ಆಕ್ಷೇಪಿಸಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿಲ್ಲ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ದ್ವಿಸದಸ್ಯ ಪೀಠ, ನಾವು ಪ್ರಕರಣದ ಅರ್ಹತೆ ಕುರಿತು ತೀರ್ಮಾನ ನೀಡುತ್ತಿಲ್ಲ. ಸಚಿವ ಸಂಪುಟದ ನಿರ್ಧಾರವನ್ನು ಯಾರು ಬೇಕಾದರೂ ಪ್ರಶ್ನಿಸಬಹುದು. ಅದು ಸಿಬಿಐ ಇರಬಹುದು ಇಲ್ಲವೇ ಸಾರ್ವಜನಿಕರು ಬೇಕಾದರೂ ರಿಟ್ ಅರ್ಜಿ ಸಲ್ಲಿಸಲಿ. ಆಗ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಿ ಸಿಬಿಐ ವಿಚಾರಣೆ ಮಾಡಬೇಕೆ ಎಂಬದನ್ನು ತೀರ್ಮಾನ ಮಾಡುತ್ತದೆಂದು ಆದೇಶದಲ್ಲಿ ಉಲೇಖ ಮಾಡಿದೆ.

ಮಧ್ಯಂತರ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಪ್ರಕರಣದಲ್ಲಿ ಪ್ರತಿ ವಾದಿಯಾಗಲು ಬಯಸಿಲ್ಲ. ಕೇವಲ ಮಾಧ್ಯಮದ ವರದಿ ಆಧರಿಸಿ ಮಧ್ಯಂತರದ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ಸರ್ಕಾರದ ತೀರ್ಮಾನವನ್ನು ಯಾರು ಪ್ರಶ್ನಿಸಿಲ್ಲ. ಸಿಬಿಐ ಹಾಗೂ ಯತ್ನಾಳ್ ಅವರ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಖಾಜಿ ಲೆಂಡಫ್ ದೋರ್ಜಿ ಪ್ರಕರಣದಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಅರ್ಜಿ ಹಿಂಪಡೆಯಲು ಅವಕಾಶ ಕಲ್ಪಿಸಿದ್ದೇವೆ ಎಂದು ಆದೇಶದಲ್ಲಿ ಹೇಳಿದರು.

ಮೇಲ್ಮನವಿ ಹಿಂಪಡೆದುಕೊಳ್ಳಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಹೇಳಿದ ನ್ಯಾಯಾಲಯ, ಪಂಜಾಬ್ ಸರ್ಕಾರ ವರ್ಸಸ್ ಗುರುದೇವ್ ಪ್ರಕರಣವನ್ನು ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿ ವಿಚಾರಣೆ ಆರಂಭಕ್ಕೂ ಮುನ್ನ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸಚಿವ ಸಂಪುಟದಲ್ಲಿ ತೆಗೆದುಕೊಂಡ ಪ್ರಸ್ತಾವನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ನಂತರ ಡಿ.ಕೆ.ಶಿವಕುಮಾರ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಾಲ್, ಅಭಿಷೇಕ್ ಮನು ಸಿಂಘ್ವಿ, ಉದಯ ಹೊಳ್ಳ ವಾದ ಮಂಡಿಸಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ, ಪೊಲೀಸರ ವಿರುದ್ಧ ಯತ್ನಾಳ್ ಆಕ್ರೋಶ

ವಾದ ಪ್ರಾರಂಭಿಸಿದ ಅಭಿಷೇಕ್ ಮನು ಸಿಂಘ್ವಿ ಸಚಿವ ಸಂಪುಟ ಸಭೆಯಲ್ಲಿ ಅರ್ಜಿದಾರರಾದ ಡಿ.ಕೆ.ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ನೀಡಿದ್ದ ಪೂರ್ವಾನುಮತಿಯನ್ನು ಹಿಂಪಡೆದ ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಸಿಬಿಐ ತನಿಖೆಗೆ ನೀಡಿದ್ದ ಪೂರ್ವಾನುಮತಿಯನ್ನು ಸರ್ಕಾರ ಹಿಂಪಡೆದಿದೆ. ಇದು ಸರಿಯೋ , ತಪೊ್ಪೀ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿ. ಹೀಗಾಗಿ ನಾವು ರಿಟ್ ಮತ್ತು ಮೇಲ್ಮನವಿ ಅರ್ಜಿಯನ್ನು ವಾಪಸ್ ಹಿಂಪಡೆಯುತ್ತೇವೆ ಎಂದು ನ್ಯಾಯಾೀಶರ ಗಮನಕ್ಕೆ ತಂದರು.

ಈ ವೇಳೆ ಡಿಕೆಶಿ ಪರ ವಕೀಲರಾದ ಕಪಿಲ್ ಸಿಬಾಲ್ ಅವರು ದೆಹಲಿ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ಪ್ರಕಾರ, ಹಿಂದಿನ ಸರ್ಕಾರ ನೀಡಿದ್ದ ಪೂರ್ವಾನುಮತಿಯನ್ನು ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಈ ಕಾಯ್ದೆ ಪ್ರಕಾರ ಸರ್ಕಾರದ ಅನುಮತಿ ಇಲ್ಲದೆ ತನಿಖೆ ಮಾಡುವಂತಿಲ್ಲ. ಶಾಸನಬದ್ದವಾಗಿ ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂಪಡೆದಿದೆ. ಇದನ್ನು ಸಿಬಿಐ ಪ್ರಶ್ನಿಸಲಿ. ನಮ್ಮ ಅಭ್ಯಂತರವಿಲ್ಲ. ನಾವು ನಮ್ಮ ರಿಟ್ ಅರ್ಜಿಯನ್ನು ಹಿಂಪಡೆಯಲು ಸಿದ್ದರಿದ್ದೇವೆ ಎಂದು ಹೇಳಿದರು.

ಸರ್ಕಾರ ತೀರ್ಮಾನ ತೆಗೆದುಕೊಂಡ ಮೇಲೆ ನಾವು ವಾದ ಮಾಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ತನಿಖೆಯನ್ನು ನಿಲ್ಲಿಸಬೇಕು. ಇದರಂತೆ ಅರ್ಜಿ ಇತ್ಯರ್ಥವಾಗಬೇಕು. ಸರ್ಕಾರದ ಅನುಮತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಗ ಮೇಲ್ಮನವಿ ಅರ್ಜಿ ಅಗತ್ಯವಿಲ್ಲ. ಈಗ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯುತ್ತೇವೆ ಎಂದು ತಿಳಿಸಿದರು.

ಇತ್ತೀಚೆಗೆ ಸಿಬಿಐ ಪ್ರಕರಣಗಳು ಯಾವ ಕಾರಣದಿಂದ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಂಪುಟದ ತೀರ್ಮಾನವಾದ ಮೇಲೆ ಯಾವುದೆ ತನಿಖಾ ಸಂಸ್ಥೆಗಳು ಮುಂದುವರೆಸುವಂತಿಲ್ಲ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಸಿಬಿಐ ಪರ ವಾದ:
ಇನ್ನು ಸಿಬಿಐ ಪರವಾಗಿ ಹಾಜರಾದ ವಕೀಲ ಪ್ರಸನ್ನಕುಮಾರ್ ಅವರು, ಈಗಾಗಲೇ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದೆ. ಇಂತಹ ಸಮಯದಲ್ಲಿ ಕ್ಯಾಬಿನೆಟ್ ಈ ರೀತಿ ನಿರ್ಧಾರ ಮಾಡೋದು ಕಾನೂನು ಬಾಹಿರ ಎಂದು ವಾದ ಮಂಡಿಸಿದರು.ಈಗಾಗಲೇ ತನಿಖೆ ಅಂತಿಮ ಹಂತದಲ್ಲಿದೆ. ಸರ್ಕಾರದ ನಿರ್ಧಾರದ ಮೂಲಕ ತನಿಖೆಯನ್ನು ನಿಷಲಗೊಳಿಸಲಾಗುತ್ತಿದೆ. ಸರ್ಕಾರದ ಈ ನಿರ್ಧಾರ ಕಾನೂನು ಬಾಹಿರವಾಗಿದೆ. ಸರ್ಕಾರದ ಈ ಆದೇಶ ನಮಗೆ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರ ನಿರ್ಧಾರ ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುತ್ತಿದೆ. ಸಿಬಿಐ ತನಿಖೆ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಕೂಡ ಸ್ಪಷ್ಟವಾಗಿದ್ದು, ಒಮ್ಮೆ ನೀಡಿದ್ದ ಒಪ್ಪಿಗೆಯನ್ನು ಸರ್ಕಾರ ಹಿಂಪಡೆಯಲು ಸಾಧ್ಯವಿಲ್ಲ ಎಂದರು. ಆಗ ಸುಪ್ರೀಂಕೋರ್ಟ್ ತೀರ್ಪು ಓದುವಂತೆ ಸಿಬಿಐ ಪರ ವಕೀಲರಿಗೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಸೂಚಿಸಿದರು. 1994ರಲ್ಲಿ ಸುಪ್ರೀಂ ತೀರ್ಪಿನಂತೆ ತನಿಖೆ ಮುಂದುವರೆಸಬಹುದಾಗಿದೆ. ತನಿಖೆ ಮುಕ್ತಾಯ ಹಂತದಲ್ಲಿರುವಾಗ ಸರ್ಕಾರಕ್ಕೆ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

ಕಾನೂನುಬಾಹಿರ ಕ್ರಮ:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪರವಾಗಿ ವಾದ ಮಂಡಿಸಿದ ವಕೀಲ ವೆಂಕಟೇಶ್ ಅವರು, ಇಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ತನಿಖೆಯ ಹಾದಿಯನ್ನು ತಪ್ಪಿಸಲು ಯತ್ನ ನಡೆದಿದೆ. ತನಿಖೆ ಅರ್ಧಕ್ಕೆ ನಿಲ್ಲಲು ಅವಕಾಶ ನೀಡಬಾರದು. ಸಿಬಿಐ ತನಿಖೆ ಮುಂದುವರಿಯಬೇಕು. ಕ್ಯಾಬಿನೆಟ್ ಇಷ್ಟೊಂದು ವೇಗವಾಗಿ ನಿರ್ಧಾರ ತೆಗೆದುಕೊಂಡಿದ್ದು ನಾವು ನೋಡಿಲ್ಲ. ಇಡೀ ಸಂಪುಟ ಡಿಸಿಎಂ ಪರ ನಿಂತು ಆದೇಶ ಮಾಡಿದೆ ಸರ್ಕಾರ ಆದೇಶ ಉಲ್ಲಂಘನೆ ಮಾಡಬಹುದೇ ಎಂದು ಪ್ರಶ್ನೆ ಮಾಡಿದರು.ಅಂತಿಮವಾಗಿ ಎಲ್ಲರ ವಾದ-ವಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ಕೃಷ್ಣದೀಕ್ಷಿತ್ ಅವರಿದ್ದ ಪೀಠ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯಲು ಅವಕಾಶ ಕಲ್ಪಿಸಿತ್ತು.

ನಾನು ಯಾವುದೇ ತಪ್ಪು ಮಾಡಿಲ್ಲ
ಬೆಂಗಳೂರು,ನ.29- ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷದ ಕೆಲಸ ಮಾಡಿದ್ದೇನೆ. ಎಲ್ಲ ಆರೋಪ ಮತ್ತು ಆಚಾರಗಳಿಗೆ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿದ್ದೆ. ಬಂಡವಾಳ ಹೂಡಿಕೆ ಸಮಾವೇಶದ ಕುರಿತು ಚರ್ಚೆ ನಡೆಸಲಾಗುತ್ತಿತ್ತು. ನ್ಯಾಯಾಲ ಯದಲ್ಲಿ ಏನಾಗಿದೆ ಎಂದು ಗೊತ್ತಿಲ್ಲ. ಮಾಹಿತಿ ಇಲ್ಲದೆ ಪ್ರತಿಕ್ರಿಯಿ ಸುವುದು ಸರಿಯಲ್ಲ ಎಂದರು. ಇದು ಕೋರ್ಟ್ನ ವಿಚಾರ ಆದಷ್ಟು ದೂರ ಇರುವುದು ಒಳ್ಳೆಯದು. ನನ್ನ ವಕೀಲರು ಹೇಳುವವರೆಗೂ ನಾನು ಯಾವುದೇ ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಶಾಸಕ ಯತ್ನಾಳ್ ಸೇರಿದಂತೆ ಹಲವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲ್ಲಿ, ಎಲ್ಲರ ಆಚಾರ, ವಿಚಾರ ಮತ್ತು ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ ಎಂದರು. ನಾನೇನು ತಪ್ಪು ಮಾಡಿಲ್ಲ ಎಂದು ಒತ್ತಿ ಹೇಳಿದ ಅವರು, ಪಕ್ಷದ ಕೆಲಸ ಮಾಡಿದ್ದೇನೆ. ಅದರ ಪರಿಣಾಮ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇನೆ. ಮುಂದೆಯೂ ತೊಂದರೆ ಕೊಡುತ್ತೇವೆ ಎನ್ನುವುದಾದರೆ ಆ ಭಗವಂತ ಇದ್ದಾನೆ. ನಾಡಿನ ಜನರಿದ್ದಾರೆ ಎಂದು ಭಾವನಾತ್ಮಕವಾಗಿ ಹೇಳಿದರು. ನನಗೆ ತೊಂದರೆ ಕೊಡಲು ಹೊರಟ್ಟಿದ್ದಕ್ಕೆ ರಾಜ್ಯದಲ್ಲಿ ಏನಾಗಿದೆ ಎಂದು ಜನ ನೋಡಿದ್ದಾರೆ. ನನ್ನ ಬೆಂಬಲಕ್ಕೆ ನಿಂತ ಮತ್ತು ನನ್ನ ಪರವಾಗಿ ಪ್ರಾರ್ಥಿಸಿದ ಕೋಟ್ಯಂತರ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದರು.

RELATED ARTICLES

Latest News