Friday, November 22, 2024
Homeರಾಜ್ಯಐಷಾರಾಮಿ ವಿಮಾನ ಯಾನ ವಿವಾದ ಮರೆಮಾಚಲು 'ಹಿಜಾಬ್ ಅಸ್ತ್ರ' ಪ್ರಯೋಗ

ಐಷಾರಾಮಿ ವಿಮಾನ ಯಾನ ವಿವಾದ ಮರೆಮಾಚಲು ‘ಹಿಜಾಬ್ ಅಸ್ತ್ರ’ ಪ್ರಯೋಗ

ಬೆಂಗಳೂರು,ಡಿ.23- ಹಿಜಾಬ್‍ಗೆ ಸಂಬಂಧಿಸಿದ ಶಿಕ್ಷಣ ಇಲಾಖೆ ಆದೇಶವನ್ನು ಹಿಂಪಡೆಯುವುದಾಗಿ ಘೋಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಅದರ ಬೆಂಬಲಿಗ ಸಂಘಟನೆಗಳನ್ನು ಕೆಣಕಿದ್ದು, ಕಾಂಗ್ರೆಸ್‍ನ ಮತಬ್ಯಾಂಕ್ ಕ್ರೂಢೀಕರಣಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ.

ದೆಹಲಿಯ ಭೇಟಿ ಬಳಿಕ ಬೆಂಗಳೂರಿಗೆ ಮರಳುವಾಗ ಐಷಾರಾಮಿ ವಿಮಾನದಲ್ಲಿ ಸಿದ್ದರಾಮಯ್ಯ ಮತ್ತು ಸಂಪುಟದ ಕೆಲ ಸಚಿವರು ಹಾಗೂ ಬೆಂಬಲಿಗರು ಪ್ರಯಾಣ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ರಾಜ್ಯ ನಾಯಕರಷ್ಟೇ ಅಲ್ಲ, ರಾಷ್ಟ್ರೀಯ ನಾಯಕರೂ ಕೂಡ. ಈ ಕುರಿತಂತೆ ವಾಗ್ದಾಳಿಯನ್ನು ನಡೆಸಲಾರಂಭಿಸಿದರು. ಜನಸಾಮಾನ್ಯರಲ್ಲೂ ಕಾಂಗ್ರೆಸಿಗರ ಐಷಾರಾಮಿ ಬದುಕಿನ ಬಗ್ಗೆ ಆಕ್ಷೇಪಗಳು ಕೇಳಿಬರಲಾರಂಭಿಸಿದವು.

ವಿವಾದ ಭುಗಿಲೇಳುತ್ತಿದ್ದಂತೆ ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ವಿಷಯಾಂತರ ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‍ನಲ್ಲಿರುವ ಚುನಾವಣಾ ರಣತಂತ್ರಗಾರರು ಪ್ರತೀ ಹಂತದಲ್ಲೂ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದು, ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದನ್ನು ಆಧರಿಸಿ ಕಾಂಗ್ರೆಸ್ ನಾಯಕರು ಹಲವಾರು ವಿವಾದಗಳ ವಿಷಯಾಂತರ ಮಾಡುವ ಮೂಲಕ ಬಿಜೆಪಿಗೆ ಎದುರೇಟು ನೀಡುತ್ತಿದ್ದಾರೆ.

ಐಷಾರಾಮಿ ವಿಮಾನದ ಪ್ರಯಾಣವನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವಾರು ಮಂದಿ ಪ್ರಸ್ತಾಪಿಸಿ ಸಿದ್ದರಾಮಯ್ಯ ಮತ್ತು ಅವರ ಬಣವನ್ನು ಅಪರಾ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಐಷಾರಾಮಿ ವಿಮಾನದಲ್ಲಿ ಓಡಾಡುತ್ತಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರಾದರೂ ಅದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ.

“ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಸಿಎಂ ಅವರೇ ಕೈ ಹಾಕಿರುವುದು ದುರದೃಷ್ಟ”

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಮಾದಾವರದ ಬಳಿಯಿರುವ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ನಗರದ ಜಕ್ಕೂರಿನಿಂದ ಹೆಲಿಕಾಫ್ಟರ್‍ನಲ್ಲಿ ಪ್ರಯಾಣಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೆಂಗೇರಿಯಿಂದ ವಿಮಾನನಿಲ್ದಾಣಕ್ಕೆ ಹೆಲಿಕಾಫ್ಟರ್ ಬಳಕೆ ಮಾಡಿದ್ದರು ಎಂಬೆಲ್ಲಾ ಮಾಹಿತಿಗಳನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವರ್ಚಸ್ಸು ಹಾನಿಯನ್ನು ತಡೆಯುವ ಪ್ರಯತ್ನ ನಡೆಸಿತ್ತು. ಆದರೆ ಅದ್ಯಾವುದೂ ನಿರೀಕ್ಷಿತ ಫಲ ನೀಡಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಜಾಬ್ ಅಸ್ತ್ರವನ್ನು ಬಳಕೆ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಿದ್ದಾರೆ.

ಬಿಜೆಪಿ ನಾಯಕರು ಐಷಾರಾಮಿ ವಿಮಾನ ಪ್ರಯಾಣದ ವಿವಾದವನ್ನು ಬದಿಗಿರಿಸಿ ಹಿಜಾಬ್ ಅಸ್ತ್ರವನ್ನು ಕೈಗೆತ್ತಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿಗೆ ಇಳಿದಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರ ಟೀಕೆಗಳು ಕಾಂಗ್ರೆಸ್‍ನ ಮತ ಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಅಲ್ಪಸಂಖ್ಯಾತರ ಮತ ಬ್ಯಾಂಕ್ ಕಾಂಗ್ರೆಸ್ ಜೊತೆ ಗಟ್ಟಿಯಾಗಿ ನಿಲ್ಲುವಂತಹ ಓಲೈಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ಸಿದ್ದರಾಮಯ್ಯ ಅವರ ಹೇಳಿಕೆ ಮುಸ್ಲಿಂ ಸಮುದಾಯದಲ್ಲಿ ಸೃಷ್ಟಿಸಿದ್ದ ಅಸಹನೆಗೆ ಕೊಂಚ ತಂಪೆರೆದಂತಾಗಿದೆ.

ಮುಂಬೈ ವಿವಿಯಲ್ಲಿ ದೇವಸ್ಥಾನ ನಿರ್ವಹಣೆ ಕೋರ್ಸ್ ಆರಂಭ

ಬಿಜೆಪಿ ಕೋಮು ರಾಜಕಾರಣಕ್ಕೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭ ಮಾಡಿಕೊಟ್ಟಿದೆ.ಪಂಚರಾಜ್ಯ ಚುನಾವಣೆಗಳ ಪೈಕಿ ಉಳಿದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಷಯದಲ್ಲಿ ಹೆಚ್ಚೇನು ಆಸಕ್ತಿ ವಹಿಸಲಿಲ್ಲ. ಜೊತೆಗೆ ಅಲ್ಲಿನ ಸ್ಥಳೀಯ ಪಕ್ಷಗಳು ವೋಟ್ ಬ್ಯಾಂಕ್ ಅನ್ನು ಸಿದ್ಧಗೊಳಿಸಿ ಹಂಚಿಕೊಂಡಿದ್ದವು. ಎಲ್ಲೆಲ್ಲಿ ಅಲ್ಪಸಂಖ್ಯಾತರ, ದಲಿತರ ಮತಗಳು ವಿಭಜನೆಯಾಗದಂತಹ ರಣತಂತ್ರ ರೂಪಿಸಲಾಗಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಗೆದ್ದಿರುವುದು ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ.

ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಹಿಜಾಬ್ ಅಸ್ತ್ರವನ್ನು ಉಪಯೋಗಿಸಿ ಒಂದೆಡೆ ಬಿಜೆಪಿಯನ್ನು ಕೆಣಕಿದೆಯಲ್ಲದೆ, ಮತ್ತೊಂದೆಡೆ ಅಲ್ಪಸಂಖ್ಯಾತರ ಮತಗಳನ್ನು ಕ್ರೂಢೀಕರಿಸಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES

Latest News