ಶಿಮ್ಲಾ,ಜ.21- ಶ್ರೀರಾಮಜನ್ಮಭೂಮಿ ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹಿಮಾಚಲ ಪ್ರದೇಶ ಸರ್ಕಾರ ಒಂದು ದಿನದ ರಜೆ ಘೋಷಣೆ ಮಾಡಿದೆ. ನಾಳೆ ನಡೆಯಲಿರುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ಒಂದು ದಿನದ ಸರ್ಕಾರಿ ರಜೆ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಅರ್ಧ ದಿನ ರಜೆ ನೀಡಿದೆ. ಬಿಜೆಪಿಯೇತರ ಆಡಳಿತದ ಸರ್ಕಾರಗಳು ಕೆಲವು ಕಡೆ ರಜೆ ನೀಡಿದರೆ, ಇನ್ನೂ ಕೆಲವೆಡೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಟಸ್ಥವಾಗಿವೆ.
ಈ ನಡುವೆ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿನ ಸರ್ಕಾರ ರಜೆ ಘೋಷಣೆ ಮಾಡಿರುವುದು ಗಮನ ಸೆಳೆದಿದೆ. ಅಲ್ಲಿನ ಮುಖ್ಯ ಕಾರ್ಯದರ್ಶಿ ಪ್ರಬೋಧ್ ಸಕ್ಸೇನಾ ಇಂದು ಸರ್ಕಾರಿ ಆದೇಶ ಹೊರಡಿಸಿದ್ದು, ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರದ ಇಲಾಖೆಗಳು, ನಿಗಮ ಮಂಡಳಿಗಳಿಗೆ ರಜೆ ಘೋಷಿಸಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಅಥವಾ ವೀಕ್ಷಿಸಲು ಅನುಕೂಲವಾಗುವಂತೆ ರಜೆ ನೀಡಿರುವುದಾಗಿ ತಿಳಿಸಿದ್ದಾರೆ.
ರಾಮಸೇತು ಅರಿಚಲಮುನೈನಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ವ್ಯಾಪಕ ಒತ್ತಡ ಹೇರುತ್ತಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಸಕಾರಾತ್ಮಕವಾಗಿ ಸ್ಪಂದಿಸದೆ ರಜೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಕಾಂಗ್ರೆಸ್‍ನ ಎಐಸಿಸಿ ನಾಯಕರು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ ಬಳಿಕ ಕಾಂಗ್ರೆಸ್ ಆಡಳಿತದ ರಾಜ್ಯಗಳು ಸರ್ಕಾರಿ ರಜೆ ಘೋಷಿಸಲು ಹಿಂದೆಮುಂದೆ ನೋಡುತ್ತಿವೆ. ಇಂತಹ ಸಂಕೀರ್ಣದ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಸರ್ಕಾರದ ಆದೇಶ ಗಮನ ಸೆಳೆದಿದೆ.