Saturday, November 23, 2024
Homeರಾಜಕೀಯ | Politicsರಾಜಕೀಯದ ಲಾಭಕ್ಕಾಗಿ ಬಿಜೆಪಿ ಹಿಂದುತ್ವದ ಚರ್ಚೆ ಮಾಡುತ್ತಿದೆ : ಸಚಿವ ಸಂತೋಷ್ ಲಾಡ್

ರಾಜಕೀಯದ ಲಾಭಕ್ಕಾಗಿ ಬಿಜೆಪಿ ಹಿಂದುತ್ವದ ಚರ್ಚೆ ಮಾಡುತ್ತಿದೆ : ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ,ಜ.6- ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ಪ್ರಚಾರ ತಂತ್ರಗಾರಿಕೆಯಿಂದ ರಾಜಕೀಯ ಲಾಭ ಪಡೆಯಲಾಗುತ್ತಿದೆಯೇ ಹೊರತು ಹಿಂದೂಗಳಿಗೆ ಯಾವುದೇ ಲಾಭವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಚಾರದ ತಂತ್ರಗಾರಿಕೆಗಳು ವ್ಯಾಪಕವಾಗಿವೆ. ಅದರ ಪರಿಣಾಮವಾಗಿ ಒಬ್ಬರು ಈಜಾಡುವುದನ್ನು ದೇಶ ನೋಡುವಂತೆ ಮಾಡಲಾಗುತ್ತಿದೆ.

ಮಣಿಪುರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿ, ಬೆತ್ತಲೆ ಮೆರವಣಿಗೆ ಮಾಡಿದರೂ ಕೇಳುವವರಿಲ್ಲ. ಇಲ್ಲಿ ಒಬ್ಬ ಆರೋಪಿಯ ಮೇಲೆ ಕ್ರಮ ಕೈಗೊಂಡರೆ ಅದನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವನ್ನು ದೊಡ್ಡ ವಿಚಾರವನ್ನಾಗಿ ಮಾಡಲಾಗಿದೆ. ಆತನ ಮೇಲೆ ಹಲವಾರು ಕೇಸುಗಳಿವೆ. ಎಲ್ಲವನ್ನೂ ಬಿಟ್ಟು ಒಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವೂ ಆತನ ವಿರುದ್ಧ 3 ಪ್ರಕರಣ ದಾಖಲಿಸಿತ್ತು ಎಂದು ತಿಳಿಸಿದರು.

ಹಲವು ಪ್ರಕರಣಗಳಲ್ಲಿ ಬಂಧಿತ ಶ್ರೀಕಾಂತ್ ಪೂಜಾರಿಗೆ ಜಾಮೀನು ಸಿಕ್ಕಿಲ್ಲ. ಅವೆಲ್ಲವನ್ನೂ ಬಿಟ್ಟು ಕರಸೇವೆ ಎಂಬ ಒಂದೇ ವಿಚಾರವನ್ನು ದೊಡ್ಡದು ಮಾಡಲಾಗುತ್ತಿದೆ. ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ 36 ಪ್ರಕರಣಗಳು ಬಾಕಿ ಉಳಿದಿದ್ದವು. ಅದರಲ್ಲಿ 10 ಮಂದಿ ಮುಸ್ಲಿಮರಿದ್ದರು. ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಆದರೆ ಒಬ್ಬ ವ್ಯಕ್ತಿಯನ್ನು ಮಾತ್ರ ಮುಂದಿಟ್ಟುಕೊಂಡು ರಾಷ್ಟ್ರಮಟ್ಟದವರೆಗೂ ವಿಷಯ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ದೂರಿದರು.

ಈ ವಿಚಾರದಲ್ಲಿ ಮಣಿಪುರದ ಚರ್ಚೆಯೇ ಕಾಣುತ್ತಿಲ್ಲ. ಒಂದು ವರ್ಷದಿಂದಲೂ ಅಲ್ಲಿ ಬೆಂಕಿ ಹತ್ತಿಕೊಂಡಿದೆ, ಕೊಲೆಗಳಾಗುತ್ತಿವೆ, ಮಹಿಳೆಯರ ಬೆತ್ತಲೆ ಮೆರವಣಿಗೆಗಳಾಗುತ್ತಿವೆ. ಇದನ್ನೆಲ್ಲಾ ಏಕೆ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಹಿಂದುತ್ವದ ಚರ್ಚೆಯಿಂದ ಹಿಂದೂಗಳಿಗೆ ಲಾಭವಾಗುತ್ತಿಲ್ಲ. ಬದಲಾಗಿ ಬಿಜೆಪಿಗೆ ಲಾಭವಾಗುತ್ತದೆ. ಹಿಂದೂಗಳಿಗೆ ಒಂದೇ ಒಂದು ಯೋಜನೆಯ ಲಾಭ ತಲುಪಿಲ್ಲ. ಚುನಾವಣೆ ಬಂತು ಎಂಬ ಕಾರಣಕ್ಕೆ ಹಿಂದುತ್ವ ಎಂದು ಭಾವನಾತ್ಮಕ ರಾಜಕಾರಣ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಿಂದಲೂ ಹಿಂದೂಗಳಿಗೆ ಮಾಡಿರುವುದೇನು ಎಂದು ಪ್ರಶ್ನಿಸಿದರು.

ಪಿಎಸ್‍ಎಲ್‍ವಿ ಎಕ್ಸ್‌ಪೋಸ್ಯಾಟ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ : ಇಸ್ರೋ ಮುಖ್ಯಸ್ಥ ಸೋಮನಾಥ್

ಎಲ್ಲೋ ಹೋಗಿ ನೀರಿನಲ್ಲಿ ಈಜಾಡಿದರೆ ಅದನ್ನು ದೇಶ ನೋಡಬೇಕಾ? ಇದರಿಂದ ಜನರಿಗೇನು ಲಾಭ? ದೇಶಕ್ಕೇನು ಅನುಕೂಲ? ಎಲ್ಲವೂ ಪ್ರಚಾರಕ್ಕಾಗಿ ನಡೆಯುತ್ತಿದೆ. ಅದರಿಂದ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರಮೋದಿಗೆ ಹೊರತುಪಡಿಸಿದರೆ ಬೇರ್ಯಾರಿಗೂ ಲಾಭವಿಲ್ಲ ಎಂದರು.

ವೈಯಕ್ತಿಕವಾಗಿ ನನ್ನ ಅಭಿಪ್ರಾಯ ಕೇಳುವುದಾದರೆ ನಾವೆಲ್ಲಾ ಹಿಂದೂಗಳಲ್ಲವೇ? ನಮಗೆ ನಿಮಗೆ ವಿಶೇಷವಾದ ಯಾವ ಸೌಲಭ್ಯಗಳು ತಲುಪಿವೆ ಎಂದು ಪ್ರಶ್ನಿಸಿದ ಅವರು, ಸುಮ್ಮನೆ ಹಿಂದೂಗಳ ಬಗ್ಗೆ ಮಾತನಾಡುವುದಲ್ಲ. ರಾಮ ನಮ್ಮ ದೇವರು, ದುರ್ಗಮ್ಮ, ದಂಡಿ ಮಾರಮ್ಮ, ಮೈಲಾರ ಲಿಂಗೇಶ್ವರ, ಖಂಡೋಬಾ ಸೇರಿದಂತೆ ಎಲ್ಲಾ ದೇವರುಗಳು ನಮ್ಮವೇ. ಸೀತೆ ನಮ್ಮ ತಾಯಿ. ಅವರೂ ನಮ್ಮ ದೇವರೇ. ಬರೀ ರಾಮನೇ ಏಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಮಾದ್ಯಮಗಳೇ ಅಸ್ತ್ರಗಳು. ಅದನ್ನು ಬಳಸಿಕೊಂಡು ತಮಗೆ ಬೇಕಾದ ವಿಚಾರವನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿದೆ. ಇದರಿಂದಾಗಿ ಮೂಲಸಮಸ್ಯೆಗಳು ಮರೆಮಾಚಲಾಗುತ್ತಿದೆ ಎಂದು ಹೇಳಿದರು.

RELATED ARTICLES

Latest News