ಬೆಂಗಳೂರು, ಡಿ.12- ಭಾರೀ ಭದ್ರತೆಯಿರುವ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ಕರೆಯಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ನಗರದಲ್ಲಿ 60 ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಸಂದೇಶ ಕಳುಹಿಸಿ ಆತಂಕವನ್ನುಂಟು ಮಾಡಿದ್ದ ಘಟನೆ ಮಾಸುವ ಮುನ್ನವೇ ಇಂದು ರಾಜಭವನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಕರೆಬಂದಿರುವುದು ಪೊಲೀಸರ ನಿದ್ದೆಗೆಡೆಸಿದೆ.
ರಾತ್ರಿ 11.30 ರ ಸುಮಾರಿನಲ್ಲಿ ಎನ್‍ಐಎ ಕಂಟ್ರೋಲ್ ರೂಂಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ತಕ್ಷಣ ಕಂಟ್ರೋಲ್ ರೂಂ ಸಿಬ್ಬಂದಿ ನಗರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗದಿದ್ದಾಗ ನಿಟ್ಟುಸಿರು ಬಿಟ್ಟರು.
ಬೆಂಗಳೂರಲ್ಲಿ ಅಕ್ರಮ ನೀರು ಸಂಪರ್ಕ ಹೊಂದಿದ್ದರೆ ಜೈಲು ಗ್ಯಾರಂಟಿ..!
ಇದೊಂದು ಹುಸಿ ಕರೆ ಎಂಬುದು ಖಚಿತವಾಗುತ್ತಿದ್ದಂತೆ ಎನ್‍ಐಎ ಕಂಟ್ರೋಲ್ ರೂಂ ಸಿಬ್ಬಂದಿಯಿಂದ ಕರೆ ಮಾಡಿದ ನಂಬರ್ ಪಡೆದು ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಸಿ ಕರೆ ಮಾಡಿದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.ಡಿ.1 ರಂದು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸುಮಾರು 60 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ ಬಂದಿದ್ದವು.
ಅಂದಿನ ಘಟನೆಗೆ ಸಂಬಂಸಿದಂತೆ ಆಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇ-ಮೇಲ್ ರಿಜಿಸ್ಟ್ರೇಶನ್ ಲಾಗಿನ್ ಐಪಿ ಮಾಹಿತಿ, ಇ-ಮೇಲ್ ಚಾಟ್ ಸೇರಿದಂತೆ ಹಲವು ಮಾಹಿತಿ ನೀಡುವಂತೆ ಗೂಗಲ್‍ಗೆ ಪತ್ರ ಬರೆದು ವಿವರಣೆ ಕೇಳಿದ್ದಾರೆ. ಹುಸಿ ಬಾಂಬ್ ಸಂದೇಶ ಕಳುಹಿಸಿದ್ದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಪೊಲೀಸ್ ಇಲಾಖೆ ಸರ್ವರ್ ಪ್ರೊವೈಡರ್‍ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.