Friday, November 22, 2024
Homeಬೆಂಗಳೂರುನೀರಿಲ್ಲದಿದ್ದರೂ ಬೆಂಗಳೂರಲ್ಲಿ ನಿಲ್ಲದ ಓಕುಳಿ ಸಂಭ್ರಮ

ನೀರಿಲ್ಲದಿದ್ದರೂ ಬೆಂಗಳೂರಲ್ಲಿ ನಿಲ್ಲದ ಓಕುಳಿ ಸಂಭ್ರಮ

ಬೆಂಗಳೂರು, ಮಾ.25- ಎಲ್ಲೆಡೆ ಹೋಳಿಯ ಸಂಭ್ರಮ ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚಿ ಸಂತೋಷ ಪಡುವುದು. ಎಲ್ಲರ ಮೊಗದಲ್ಲಿ ನಗು ತರುವುದು ಹೋಳಿ ಹಬ್ಬದ ವಿಶೇಷ.ಇಂದು ಎಲ್ಲೆಡೆ ಹೋಳಿ ಹಬ್ಬದ ಖುಷಿ. ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಿಸಲಾಯಿತು.

ಹೋಳಿ ಎಲ್ಲರಲ್ಲೂ ಸಂತೋಷ ಹಾಗೂ ಸಂಭ್ರಮ ತರುವ ಹಬ್ಬ. ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬವನ್ನು ವಿವಿಧ ಪ್ರದೇಶಗಳಲ್ಲಿ, ವಿವಿಧ ರೀತಿಯಲ್ಲಿ, ವಿವಿಧ ಬಗೆಗಳಲ್ಲಿ ಆಚರಿಸುತ್ತಾರೆ. ಆದರೆ ಹಬ್ಬದ ಆಚರಣೆ ಮತ್ತು ಉದ್ದೇಶಗಳು ಒಂದೇ ಆಗಿರುತ್ತದೆ. ದುಷ್ಟ ಶಕ್ತಿಗಳನ್ನು ದಹಿಸಿ, ದೈವಶಕ್ತಿಗಳು ಜಯಿಸುವುದು ಈ ಹಬ್ಬದ ಮಹತ್ವವಾಗಿದೆ. ಇದನ್ನು ಸಾರುವುದೇ ಹೋಳಿ.

ಹೋಳಿಕಾ ದಹನ ದುಷ್ಟತನ ಮತ್ತು ಅಹಂಕಾರದಿಂದ ಯಾವುದನ್ನು ಜಯಿಸಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸ ಮತ್ತು ಸಹಕಾರ ಮನೋಭಾವದಿಂದ ಎಲ್ಲರ ಜಯಿಸಬಹುದು, ಸಂತೋಷವನ್ನು ಪಡೆಯಬಹುದು ಎಂಬ ಅರ್ಥವನ್ನು ತಿಳಿಸಿಕೊಡುತ್ತದೆ.ದೈವಶಕ್ತಿಯ ಮುಂದೆ ದುಷ್ಟಶಕ್ತಿಯ ಆಟ ಎಂದೂ ನಡೆಯುವುದಿಲ್ಲ ಎಂಬುದನ್ನು ಹೋಳಿಕಾ ದಹನ ಸಾರುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿಯ ಕುಣಿತವನ್ನು ಮಾಡುವ ಮೂಲಕ ಹೋಳಿಯನ್ನು ಆಚರಿಸುತ್ತಾರೆ, ಹಬ್ಬದ ದಿನ ಕಾಮನನ್ನು ಸುಡುವುದು, ಬೂದಿ ಹಾಗೂ ಬಣ್ಣವನ್ನು ಬಳಿದುಕೊಂಡು ಏಕತೆಯ ರೂಪದಲ್ಲಿ ಹಬ್ಬದ ಸಂತೋಷವನ್ನು ಪಡೆದುಕೊಳ್ಳುವರು. ನಗರ ಪ್ರದೇಶಗಳಲ್ಲಿ ವಿವಿಧ ಬಣ್ಣಗಳ ಸಿಂಚನ ಮಾಡಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಾರೆ. ಇಂದು ಎಲ್ಲೆಡೆ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.

ರಂಗಿನ ಓಕುಳಿಗೆ ಜಲಕಂಟಕ :
ಬಣ್ಣದ ಹಬ್ಬ, ರಂಗಿನ ಹಬ್ಬ ಹೋಳಿಗೆ ಜಲಕಂಟಕ ಕಂಡುಬಂದಿದೆ. ಇಂದು ದೇಶಾದ್ಯಂತ ಹೋಳಿಯ ಆಚರಣೆ ನಡೆಯುತ್ತಿದ್ದು, ಬಣ್ಣಗಳ ವಿನಿಮಯದಲ್ಲಿ ವಯಸ್ಸನ್ನು ಮೀರಿ ಎಲ್ಲರೂ ಭಾಗವಹಿಸುವುದು ಕಂಡುಬರುತ್ತಿದೆ. ಈ ಮೊದಲು ಹೋಳಿ ಎಂದರೆ ಬಣ್ಣದ ಜೊತೆಗೆ ಬಣ್ಣದ ನೀರಿನ ಎರಚಾಟವೂ ಸಾಮಾನ್ಯವಾಗಿರುತ್ತಿತ್ತು. ರಸ್ತೆಗಳು ಓಕುಳಿಯ ನೀರಿನಿಂದ ತೊಯ್ದು ಹೋಗುತ್ತಿದ್ದವು. ಒಬ್ಬರ ಮೇಲೊಬ್ಬರು ಬಣ್ಣದ ನೀರನ್ನು ಎರಚಿ ಸಂಭ್ರಮಿಸುತ್ತಿದ್ದರು. ಈ ಬಾರಿ ಭೀಕರ ಬರ ಪರಿಸ್ಥಿತಿಯಿಂದಾಗಿ ನೀರಿನ ಅಭಾವ ತೀವ್ರವಾಗಿದೆ. ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಇದೆ. ರಾಜ್ಯಸರ್ಕಾರ ನೀರನ್ನು ಅನಗತ್ಯವಾಗಿ ವೆಚ್ಚ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ಕಾರು, ಬೈಕಿನಂತಹ ವಾಹನಗಳನ್ನು ತೊಳೆಯಲು, ತೋಟಗಾರಿಕೆ ಉದ್ದೇಶಗಳಿಗೆ, ಮನೆ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸಬಾರದೆಂದು ಸುತ್ತೋಲೆ ಹೊರಡಿಸಲಾಗಿದ್ದು, ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಿನ ದುರ್ಬಳಕೆ ರಹಿತವಾದ ಹೋಳಿ ಆಚರಣೆ ನಡೆಯುತ್ತಿದೆ.

ಐಪಿಎಲ್ ಆಟಕ್ಕಾಗಿ ಬೆಂಗಳೂರಿನಲ್ಲಿರುವ ಹಿರಿಯ ಕಾಮೆಂಟರ್ ರವಿಶಾಸ್ತ್ರಿ ಅವರು ಹೋಳಿ ಹಬ್ಬಕ್ಕೆ ಶುಭ ಹಾರೈಸಿದ್ದು, ನೀರನ್ನು ಅಪವ್ಯಯ ಮಾಡದೆ ಸಂಭ್ರಮದ ಹೋಳಿ ಆಚರಣೆ ಮಾಡೋಣ ಎಂದು ಕರೆ ನೀಡಿದ್ದಾರೆ.ರಾಜ್ಯಾದ್ಯಂತ ಜನರು ಕೂಡ ಹೋಳಿಯ ಆಚರಣೆಗೆ ನೀರನ್ನು ದುರ್ಬಳಕೆ ಮಾಡಿಕೊಳ್ಳದೆ ಬಣ್ಣದ ಆಟ ಆಡುತ್ತಿದ್ದಾರೆ.

RELATED ARTICLES

Latest News