ಬೆಂಗಳೂರು, ನ.30- ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರು ಬೆಂಗಳೂರಿಗೆ ಬರುವುದು ಹಣ ವಸೂಲಿಗೆ ಎನ್ನುವುದಾದರೆ, ಹಿಂದೆ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇಲ್ಲಿಯೇ ಇರುತ್ತಿದ್ದರಲ್ಲ ಅದಕ್ಕೆ ಏನು ಹೇಳಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಇತ್ತು, ಆಗ ಅವರ ಕಾರ್ಯದರ್ಶಿಯವರು ಯಾವಾಗಲೂ ಇಲ್ಲೇ ಇರುತ್ತಿದ್ದರು. ಆಗ ಅವರೇನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಸ್ವಾಭಾವಿಕವಾಗಿ ಬರುತ್ತದೆ. ಮೊದಲು ಬಿಜೆಪಿಯವರು ಅದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದರು.
ಶಾಸಕ ಬಿ .ಆರ್. ಪಾಟೀಲ್ ಅಸಮಧಾನ ವಿಚಾರ ಕುರಿತು ತಮಗೆ ಮಾಹಿತಿ ಇಲ್ಲ. ಅವರು ಬರೆದಿರುವ ಪತ್ರವನ್ನು ತಾವು ನೋಡಿಲ್ಲ, ಓದಿಯೂ ಇಲ್ಲ. ಮುಖ್ಯಮಂತ್ರಿಯವರು ಈ ವಿಚಾರವಾಗಿ ಗಮನ ಹರಿಸುತ್ತಾರೆ ಎಂದ ಅವರು, ಈ ಮೊದಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಎಲ್ಲವೂ ಮುಗಿಯಿತು ಎಂದು ಕೊಂಡಿದ್ದೇವು. ಆದರೆ ಮತ್ತೆ ಪಾಟೀಲರು ಪತ್ರ ಬರೆದಿದ್ದಾರೆ. ಯಾವ ವಿಚಾರಕ್ಕೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಯಷ್ಟೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು : ಸಿಎಂ
ಮೊದಲ ಸಲ ಗೆದ್ದವರಿಗೆ ನಿಗಮ ಮಂಡಳಿ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅವರ ಅಭಿಪ್ರಾಯ ಹೇಳಿದ್ದಾರೆ ಮತ್ತು ಅದೇ ಅಂತಿಮವಾಗಿರುತ್ತದೆ. ಹೊಸಬರಿಗೆ ಯಾಕೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಡುತ್ತಿಲ್ಲ ಎಂಬ ಬಗ್ಗೆಯೂ ಡಿ.ಕೆ.ಶಿವಕುಮಾರ್ ಅವರೇ ಹೇಳಬೇಕು. ಹೆಚ್ಚು ಬಾರಿ ಗೆದ್ದವರನ್ನು ನೇಮಿಸಬಹುದು. ಯಾವ ಪದ್ಧತಿ,ಮಾನದಂಡ ಅನುಸರಿಸ್ತಿದ್ದಾರೆ ಗೊತ್ತಿಲ್ಲ ಎಂದರು.
ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತ ಪಡಿಸಿರುವ ಬಗ್ಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಯವರು, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸುತ್ತಾರೆ. ಬಾಕಿ ಬಿಲ್ ಪಾವತಿ ಬಗ್ಗೆ ಏನೋ ಪದ್ಧತಿ ಇದೆ, ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳಿವೆ. ಅದನ್ನು ಪಾಲನೆ ಮಾಡುತ್ತಾರೆ ಎಂದರು.
ಈ ಸರ್ಕಾರದ ಅವಧಿಯಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪದ ಬಗ್ಗೆ ತಮಗೆ ಮಾಹಿತಿ ಇಲ್ಲ. ಅಂತಹ ಮಾಹಿತಿಗಳಿದ್ದರೆ ಕೆಂಪಣ್ಣ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತರಲಿ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ನಮ್ಮ ಸರ್ಕಾರ ಹಿಂಪಡೆದಿದೆ. ನ್ಯಾಯಾಲಯ ಮುಂದೆ ಏನು ನಿರ್ಣಯ ತೆಗೆದುಕೊಳ್ಳಲಿದೆ, ಸಿಬಿಐನವರ ಪ್ರಕ್ರಿಯೆಗಳು ಏನಿವೆ ಎಂಬ ಬಗ್ಗೆ ನಮಗಿನ್ನೂ ಮಾಹಿತಿ ಇಲ್ಲ ಎಂದರು.