ಬೆಂಗಳೂರು, ಫೆ. 21- ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ವಿಧಾನಸಭೆಗೆ ತಿಳಿಸಿದರು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ನಿನ್ನೆ ನಾವು ಪ್ರಸ್ತಾಪಿಸಿದ ವಕೀಲರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್, ಗೃಹಸಚಿವರಿಗೆ ಹೇಳಿಕೆ ನೀಡಲು ಅವಕಾಶ ಮಾಡಿಕೊಟ್ಟರು.
ರಾಮನಗರದಲ್ಲಿ ವಕೀಲರು ಪ್ರತಿಭಟನೆ ಮಾಡಿದ ವಿಚಾರವನ್ನು ನಿನ್ನೆ ಪ್ರತಿಪಕ್ಷಗಳ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದರು. ನಿನ್ನೆ ರಾಮನಗರದ ಘಟನೆಗೆ ಸಂಬಂಧಿಸಿದಂತೆ ನೀಡಿದ ಉತ್ತರ ಪ್ರತಿಪಕ್ಷಗಳಿಗೆ ಸಮಾಧಾನ ತಂದಿರಲಿಲ್ಲ. ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವ ಬೇಡಿಕೆ ಇಟ್ಟಿದ್ದರು ಪರಮೇಶ್ವರ್ ತಿಳಿಸಿದರು.
ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುತ್ತಿದ್ದೇವೆ. ವಕೀಲರ ಪ್ರತಿಭಟನೆಗೆ ಕಾರಣರಾದ ಚಾಂದ್‍ಪಾಷ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಡಿವೈಎಸ್ಪಿ ನೇತೃತ್ವದಲ್ಲಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡಿದೆ. ಪಿಎಸ್‍ಐ ಅಮಾನತ್ತು ಮಾಡಿರುವುದರಿಂದ ತನಿಖೆಗೂ ಅನುಕೂಲವಾಗಲಿದೆ. ರಾಮಗನರದಲ್ಲಿ ಈ ಹಿಂದೆ ಕೂಡ ಇಂತಹ ಘಟನೆಗಳು ಆಗಿದ್ದವು ಎಂದು ಅವರು ತಿಳಿಸಿದರು.
ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್.ನಾರಿಮನ್ ನಿಧನ
ಈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ವಕೀಲರು ನಿರ್ಧಾರ ಮಾಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದರು. ಆರ್.ಅಶೋಕ್ ಮಾತನಾಡಿ, ಈ ಅಧಿವೇಶನದಲ್ಲಿ ಮೊದಲ ಬಾರಿಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನಸಭೆ ನಡೆಸಿ ಯಶಸ್ವಿಯಾಗಿ ಸಂಧಾನ ಮಾಡಿರುವುದಕ್ಕೆ ಸಭಾಧ್ಯಕ್ಷರನ್ನು ಅಭಿನಂದಿಸುವುದಾಗಿ ಹೇಳಿದರು.
ರಾಮನಗರದ ಹಿಡಿತವನ್ನು ಮೀರಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ನಮ್ಮ ಬೇಡಿಕೆಯಂತೆ ಗೃಹಸಚಿವರು ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಗೃಹ ಸಚಿವರನ್ನು ಅಭಿನಂದಿಸುವುದಾಗಿ ಹೇಳಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು. ವಕೀಲರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡುವುದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳಾಗುತ್ತಿದ್ದವು. ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದ್ದು, ಈ ಉತ್ತರ ಸಮಾಧಾನ ತಂದಿದೆ ಎಂದು ಹೇಳಿದರು.
ರಾಮನಗರದ ಜಿಲ್ಲಾ ವಕೀಲರ ಸಂಘದ 40 ವಕೀಲರ ಮೇಲೆ ಎಫ್‍ಐಆರ್ ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ರಾಮನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವಿಷಯವನ್ನು ನಿನ್ನೆ ಸದನದಲ್ಲಿ ಪ್ರತಿಪಕ್ಷಗಳ ಶಾಸಕರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು. ವಕೀಲರ ಮೇಲೆ ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆಯ ಪಿಎಸ್‍ಐ ಅವರನ್ನು ಅಮಾನತು ಮಾಡಬೇಕು, ವಕೀಲ ಚಾಂದ್ ಪಾಷಾನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ನಡೆಸಿದರು. ಈ ವೇಳೆ ಆಡಳಿತ ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದವೂ ನಡೆದಿತ್ತು.
ಬಿಹಾರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವು
ಸದನ ಮುಂದೂಡಿದ ಸಭಾಧ್ಯಕ್ಷರು, ಆಡಳಿತ ವಿರೋಧ ಪಕ್ಷದ ಸದಸ್ಯರನ್ನು ತಮ್ಮ ಕೊಠಡಿಗೆ ಕರೆಸಿ ಸಂಧಾನ ನಡೆಸಿದರು. ಮತ್ತೆ ಕಲಾಪ ಆರಂಭವಾದಾಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೊಮ್ಮೆ ಉತ್ತರ ನೀಡುವುದಾಗಿ ಗೃಹಸಚಿವರು ಭರವಸೆ ನೀಡಿದ್ದರಿಂದ ಧರಣಿ ಕೈಬಿಡಲಾಗಿತ್ತು.