Saturday, April 13, 2024
Homeರಾಷ್ಟ್ರೀಯಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್.ನಾರಿಮನ್ ನಿಧನ

ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್.ನಾರಿಮನ್ ನಿಧನ

ನವದೆಹಲಿ,ಫೆ.21- ಸುಪ್ರೀಂಕೋರ್ಟ್‍ನಲ್ಲಿ ಕರ್ನಾಟಕದ ಜಲವಿವಾದಗಳ ಬಗ್ಗೆ ಹಲವಾರು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ (95) ನಿಧನರಾಗಿದ್ದಾರೆ. ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ನದಿ ನೀರು ಹಂಚಿಕೆಯ ಎಲ್ಲ ವ್ಯಾಜ್ಯಗಳಲ್ಲಿ ರಾಜ್ಯದ ಪರ ವಾದಿಸುತ್ತಿದ್ದ ಇವರಿಗೆ ಅಂತಾರಾಷ್ಟ್ರೀಯ ಜಲತಜ್ಞರೆಂಬ ಖ್ಯಾತಿಯೂ ಬಂದಿತ್ತು.ಇವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

1929 ರಂದು ಜನವರಿ 10 ರಂದು ಜನಿಸಿದ ಅವರು ನವೆಂಬರ್ 1950 ರಲ್ಲಿ ಬಾಂಬೆ ಹೈಕೋರ್ಟ್‍ನ ವಕೀಲರಾಗಿ ವೃತ್ತಿ ಆರಂಭಿಸಿದರು. 1961 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ಅವರು 70 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಅಭ್ಯಾಸ ಮಾಡಿದ್ದಾರೆ. ಅವರ ಪುತ್ರ ರೋಹಿಂಟನ್ ನಾರಿಮನ್ ಕೂಡ ಹಿರಿಯ ವಕೀಲರಾಗಿದ್ದು ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಯಾಗಿದ್ದಾರೆ. ನಾರಿಮನ್ ನವೆಂಬರ್ 1950ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಅವರು ಎಎಎಸ್‍ಜಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇಬ್ಬರು ಬಿಜೆಡಿ ನಾಯಕರು ಬಿಜೆಪಿ ಕೇಂದ್ರ ಸಚಿವ ಅವಿರೋಧವಾಗಿ ರಾಜ್ಯ ಸಭೆಗೆ ಆಯ್ಕೆ

ಅವರ ಸುದೀರ್ಘ ಕಾನೂನು ವೃತ್ತಿ ಜೀವನದಲ್ಲಿ ನಾರಿಮನ್ ಅವರು ಅನೇಕ ದೊಡ್ಡ ಐತಿಹಾಸಿಕ ಪ್ರಕರಣಗಳ ಭಾಗವಾಗಿದ್ದಾರೆ. ಕೊಲಿಜಿಯಂ ವ್ಯವಸ್ಥೆ ಅಸ್ತಿತ್ವಕ್ಕೆ ಬರಲು ಈ ವಿಷಯ ಪ್ರಮುಖ ಕಾರಣ ಎನ್ನಲಾಗಿದೆ. 1975ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿ ಸರ್ಕಾರದ ನಿರ್ಧಾರದಿಂದ ನಾರಿಮನ್ ಅವರು ಸಂತೋಷವಾಗಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರವನ್ನು ವಿರೋಧಿಸಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು 1999-2005ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಾರಿಮನ್ ಅವರು 1991 ರಿಂದ 2010 ರವರೆಗೆ ಬಾರ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು. 1989 ರಿಂದ 2005 ರವರೆಗೆ ಇಂಟರ್‍ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಪ್ಯಾರಿಸ್‍ನ ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಶನ್‍ನ ಉಪಾಧ್ಯಕ್ಷರಾಗಿದ್ದರು ಮತ್ತು ಇಂಟರ್‍ನ್ಯಾಷನಲ್ ಕೌನ್ಸಿಲ್ ಫಾರ್ ಕಮರ್ಷಿಯಲ್ ಆರ್ಬಿಟ್ರೇಶನ್‍ನ ಅಧ್ಯಕ್ಷರಾಗಿದ್ದರು. 1995 ರಿಂದ 1997 ರವರೆಗೆ ಜಿನೀವಾದಲ್ಲಿ ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿದ್ದರು.

ಕಂಬನಿ : ನಾರಿಮನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

RELATED ARTICLES

Latest News