Thursday, May 2, 2024
Homeರಾಜ್ಯಸರ್ಕಾರದ ದಮ್ಮು-ತಾಕತ್ತು ಗೊತ್ತಾಗಲಿದೆ: ಪರಮೇಶ್ವರ್

ಸರ್ಕಾರದ ದಮ್ಮು-ತಾಕತ್ತು ಗೊತ್ತಾಗಲಿದೆ: ಪರಮೇಶ್ವರ್

ಬೆಂಗಳೂರು,ಜ.3- ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ವಿರುದ್ಧ 16 ಕ್ರಿಮಿನಲ್ ಮೊಕದ್ದಮೆಗಳಿವೆ. ಹುಬ್ಬಳ್ಳಿಯಲ್ಲಿ 26 ಪ್ರಕರಣಗಳಲ್ಲಿ 36 ಆರೋಪಿ ಗಳಿದ್ದು, ಅವರಲ್ಲಿ ಇರುವ ಬೇರೆ ಹಿಂದೂಗಳ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಧಮ್ಮು, ತಾಕತ್ತು ಎಂದೆಲ್ಲ ಹೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಜನ ಯಾರಿಗೆ ಧಮ್ಮು , ತಾಕತ್ತು ಇದೆ ಎಂಬುದನ್ನು ತೋರಿಸಿದ್ದಾರೆ. ಸರ್ಕಾರಕ್ಕೆ ತಾಕತ್ತು ಇದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಪರವಾಗಿ ಬಿಜೆಪಿಯವರು ವಕಾಲತ್ತು ವಹಿಸಿ ಹೋರಾಟ ನಡೆಸುತ್ತಿರುವುದನ್ನು ನೋಡಿದರೆ ಅವರಿಗೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಶ್ರೀಕಾಂತ್ ಪೂಜಾರಿ ಕರಸೇವಕನಲ್ಲ. ಆತನ ವಿರುದ್ಧ 16 ಕ್ರಿಮಿನಲ್ ಕೇಸ್‍ಗಳಿವೆ ಎಂದರು.

ಈಗ ಪ್ರತಿಭಟನೆ ಮಾಡುವ ಬಿಜೆಪಿಯವರು ಹಿಂದೆ ಐದು ವರ್ಷ ಮತ್ತು ಇತ್ತೀಚೆಗೆ 4 ವರ್ಷ ಆಡಳಿತ ನಡೆಸಿದ್ದರು. ಒಂದು ವೇಳೆ ಶ್ರೀಕಾಂತ್ ಬಿಜೆಪಿ ಆರೋಪಿಯಾಗಿದ್ದಾಗಲೇ ಅವರ ಸರ್ಕಾರ ಇದ್ದಾಗಲೇ ಪ್ರಕರಣವನ್ನು ಇತ್ಯರ್ಥ ಮಾಡಬಹುದಿತ್ತು ಅಥವಾ ಖುಲಾಸೆಗೊಳಿಸ ಬಹುದಾಗಿತ್ತು, ಏಕೆ ಮಾಡಲಿಲ್ಲ. ಈಗ ಯಾರು, ಯಾರನ್ನು ದೂಷಣೆ ಮಾಡಬೇಕು ಎಂದು ಪ್ರಶ್ನಿಸಿದರು.

31 ವರ್ಷಗಳ ಹಳೆಯ ಪ್ರಕರಣ ಎಂಬುದು ನಿಜ. ಆದರೆ ಅವುಗಳನ್ನು ಎಷ್ಟು ವರ್ಷ ನನೆಗುದಿಯಲ್ಲಿಡಬೇಕು. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಂದು ಸೂಚನೆ ನೀಡಿದಾಗ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣವು ಮುನ್ನೆಲೆಗೆ ಬಂದಿದೆ. ಇದೊಂದೇ ಅಲ್ಲ 26 ಪ್ರಕರಣಗಳಲ್ಲಿ 36 ಮಂದಿ ಆರೋಪಿಗಳಿದ್ದಾರೆ. ಅವರಲ್ಲಿಯೂ ಹಿಂದೂಗಳಿದ್ದಾರೆ. ಅವರ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುವುದಿಲ್ಲ ಎಂದರು. ಚುನಾವಣೆಯಲ್ಲಿ ರಾಜಕೀಯ ಮಾಡಬೇಕು, ಕಾನೂನು ಸುವ್ಯವಸ್ಥೆಯಂತಹ ವಿಚಾರದಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಜನ ಈಗಾಗಲೇ ಪಾಠ ಕಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸುತ್ತಾರೆ ಎಂದು ಹೇಳಿದರು.

1 ವರ್ಷದಲ್ಲಿ ಮನೆ ಬಾಗಿಲಿಗೆ ಖಾತೆ: DCM ಡಿ.ಕೆ.ಶಿವಕುಮಾರ್

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರೆ ಪೊಲೀಸ್ ಅಧಿಕಾರಿಗಳು ವಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ವಾಸ್ತವಾಂಶಗಳನ್ನು ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಕೇಳದೆ ಇದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತಾರೆ. ಪೊಲೀಸರಿಗೆ ಕಾನೂನಿನ ಪುಸ್ತಕ ಇದೆ, ಸಮವಸ್ತ್ರ ಧರಿಸಿದ ಅಧಿಕಾರಿಗಳು ಕಾನೂನನ್ನು ಪಾಲನೆ ಮಾಡಲು ಏನೆಲ್ಲ ಬೇಕೋ ಅದನ್ನು ಖಂಡಿತ ಮಾಡುತ್ತಾರೆ ಎಂದು ಹೇಳಿದರು.

ಬೆಳಗಾವಿಯ ಬೈಲಹೊಂಗಲದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಇಂತಹ ಘಟನೆಗಳಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವಂತೆ ಸೂಚಿಸಲಾಗಿದೆ.ಯಾವುದೇ ಪ್ರಕರಣಗಳು ವರದಿಯಾದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೈಲುಹೊಂಗಲ ಪ್ರಕರಣದಲ್ಲಿ ಕೇಸು ದಾಖಲಿಸಲು ವಿಳಂಬವಾಗಿದ್ದರೆ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.


ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸೈಬರ್ ಕ್ರೈಂ ಸೇರಿದಂತೆ ಎಲ್ಲ ಪ್ರಕರಣಗಳನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಿದ್ದೇವೆ. ಅದರಿಂದಾಗಿ 46ರಿಂದ 60 ಸಾವಿರಗಳಿಗೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಈ ಹಿಂದೆ ಪ್ರಕರಣಗಳೇ ದಾಖಲಾಗುತ್ತಿರಲಿಲ್ಲ. ನಮ್ಮ ಅವಧಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ಸರ್ಕಾರದ ಉದ್ದೇಶ. ಸಮರ್ಪಕ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಸಂಖ್ಯೆ ಹೆಚ್ಚಾಗಿದೆ ಎಂದಾಕ್ಷಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಅರ್ಥವಲ್ಲ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ. ಶೀಘ್ರವೇ ತನಿಖೆ ಆರಂಭಗೊಳ್ಳಲಿದೆ ಎಂದು ಹೇಳಿದರು.

RELATED ARTICLES

Latest News