ಬೆಂಗಳೂರು,ಜ.20- ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಗೋಹತ್ಯೆಗಳ ಹಿಂದೆ ಬೇರೆ ರೀತಿಯ ಪ್ರಚೋದನೆ ಇರುವುದನ್ನು ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಗೋಹತ್ಯೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಇಂದು ಬೆಳಿಗ್ಗೆ ಪೊಲೀಸರಿಗೆ ಮತ್ತೊಮೆ ಸೂಚನೆ ನೀಡಿದ್ದೇನೆ.
ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ?, ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳಿವೆಯೇ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಾಗಿಸುವ ಯಾವುದೇ ಪ್ರಸ್ತಾವನೆಗಳು ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಆದರೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು.
ಬಹಳ ವರ್ಷಗಳಿಂದಲೂ ಬಂಧೀಖಾನೆ ಇಲಾಖೆಗೆ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.
ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆ ದಾಳಿ ನಡೆಸಿ ಒಬ್ಬರನ್ನು ಹತ್ಯೆಗೈದು, ಮತ್ತೊಬ್ಬರನ್ನು ಗಾಯಗೊಳಿಸಿ 83 ಲಕ್ಷ ದರೋಡೆ ಮಾಡಿದ ಪ್ರಕರಣದಲ್ಲಿ ಮಾಹಿತಿಗಳನ್ನು ಕಲೆಹಾಕಲಾಗಿದೆ. ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲಾಗುವುದು. ಮಂಗಳೂರಿನ ಬ್ಯಾಂಕ್ ದರೋಡೆಯಲ್ಲಿ 2 ಕಾರುಗಳನ್ನು ಬಳಸಿರುವುದು ಸೇರಿದಂತೆ ಇತರ ಮಾಹಿತಿಗಳು ದೊರೆತಿವೆ. ಈ ಎರಡೂ ಘಟನೆಗಳಿಗೆ ತಂಡವನ್ನು ರಚನೆ ಮಾಡಿ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಆರೋಪಿಗಳು ಬೇರೆ ರಾಜ್ಯದವರೋ ಅಥವಾ ಎಲ್ಲಿಯವರು ಎಂಬುದು ಸೇರಿದಂತೆ ಹಲವಾರು ಮಾಹಿತಿಗಳು ನಮ ಬಳಿ ಇವೆ. ಆದರೆ ಸದ್ಯಕ್ಕೆ ಯಾವುದನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಬೀದರ್‌ನ ಘಟನೆಯಲ್ಲಿ ಶಸ್ತ್ರ ಸಜ್ಜಿತ ಸಿಬ್ಬಂದಿ ಇಲ್ಲದೇ ಇರುವುದನ್ನು ನೋಡಿಕೊಂಡು ಕೃತ್ಯ ಎಸಗಲಾಗಿದೆ. ಮಂಗಳೂರಿನ ಘಟನೆಯಲ್ಲೂ ಭದ್ರತಾ ಸಿಬ್ಬಂದಿ ಇಲ್ಲದ ಸಂದರ್ಭವನ್ನು ಉಪಯೋಗಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಈ ರೀತಿಯ ಲೋಪಗಳಾಗಬಾರದು. ಸರ್ಕಾರ ಈಗಾಗಲೇ ಬ್ಯಾಂಕ್‌ಗಳಿಗೆ ಭದ್ರತೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಬ್ಯಾಂಕ್‌ನವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕಿರು ಸಾಲ ನೀಡಿ ಅದರ ವಸೂಲಿಗೆ ಕಿರುಕುಳ ನೀಡುತ್ತಿರುವವರಿಗೆ ಕಡಿವಾಣ ಹಾಕಲು ಪ್ರತ್ಯೇಕ ಕಾಯ್ದೆ ತರುವುದು ಹಣಕಾಸು ಇಲಾಖೆಯ ಜವಾಬ್ದಾರಿ. ದೂರುಗಳು ಬಂದರೆ ಕ್ರಮ ಕೈಗೊಳ್ಳುವುದಷ್ಟೇ ಪೊಲೀಸ್ ಇಲಾಖೆಯ ಕೆಲಸ ಎಂದರು.