ಬೆಂಗಳೂರು,ಫೆ.19- ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯನ್ನು ಯಶಸ್ವಿಗೊಳಿಸಲು, ಅಗತ್ಯ ಸಹಕಾರ ಕೊಡಿಸಲು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರವೇ ರೂಪಿಸಿದ್ದ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ವಿಳಂಬವಾಗುತ್ತಿದೆ. ಮನೆ ನಿರ್ಮಾಣದ ವೆಚ್ಚ ಐದಾರು ಲಕ್ಷದಿಂದ 12-13 ಲಕ್ಷಗಳಿಗೆ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದರು.
ಈ ಹಿಂದೆ ಬೆಂಗಳೂರಿನ ಶಾಸಕರು ಬಡವರಿಗೆ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸುವಂತೆ 2015-16 ರಲ್ಲಿ ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ಅದರ ಪರಿಣಾಮ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಅನುಷ್ಠಾನಕ್ಕೆ ಬಂದಿತ್ತು. ಆ ವೇಳೆ ಮನೆ ನಿರ್ಮಾಣದ ವೆಚ್ಚ 5 ಲಕ್ಷ ರೂ. ಇತ್ತು. ಸ್ಟಾಂಪ್ ಡ್ಯೂಟಿ, ಜಿಎಸ್‍ಟಿ ಸೇರಿದಂತೆ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮನೆ ನಿರ್ಮಾಣವೂ ದುಬಾರಿಯಾಗಿದೆ. ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.
ಅತ್ಯಾಚಾರ ಸಂತ್ರಸ್ಥೆಗೆ ಲೈಂಗಿಕ ಕಿರುಕುಳ ನೀಡಿದ ಮ್ಯಾಜಿಸ್ಟ್ರೇಟ್
ಮುಖ್ಯಮಂತ್ರಿಯವರ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿರುವವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅವರಿಗೆ ಮನೆ ನಿರ್ಮಿಸಿಕೊಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಯೋಜನೆಗೆ ಅಗತ್ಯ ಆರ್ಥಿಕ ನೆರವು ನೀಡುವಂತೆ ಬೆಂಗಳೂರಿನ ಶಾಸಕರು ಒಟ್ಟಾಗಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.