ಹಾಸನ, ಮಾ.8 – ಬೃಹತ್ ಗಾತ್ರದ ಮರ ರೈಲ್ವೆ ಹಳಿಗೆ ಅಡ್ಡಲಾಗಿ ಉರುಳಿ ಬಿದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ರೈಲು ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದ್ದು, ರೈಲು ಬರುವ ಕೆಲವೇ ನಿಮಿಷಗಳ ಮುಂಚಿತವಾಗಿ ಮರ ಉರುಳಿ ಬಿದ್ದಿದೆ.
ಶಿವಮೊಗ್ಗದಿಂದ-ಮೈಸೂರು ಕಡೆಗೆ ತೆರಳುತ್ತಿದ್ದ ರೈಲಿನ ಚಾಲಕ ಮರ ಬಿದ್ದಿರುವುದನ್ನು ಕಂಡು ತಕ್ಷಣವೇ ಸುರಕ್ಷಿತವಾಗಿ ರೈಲು ನಿಲ್ಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಯೊಡಗೂಡಿ ಕಾರ್ಯಾಚರಣೆ ನಡೆಸಿ ಹಳಿ ಮೇಲೆ ಬಿದಿದ್ದ ಮರವನ್ನು ತೆರವುಗೊಳಿಸಿದ್ದಾರೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.