ಚಿಕ್ಕಮಗಳೂರು,ಅ.13 – ಕಳೆದ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿ ಕೌಟುಂಬಿಕ ಕಲಹದಿಂದ ತವರು ಸೇರಿದ್ದು, ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ನೇತ್ರಾವತಿ (32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಸಕಲೇಶಪುರದ ನವೀನ್ ಎಂಬುವವರ ಜೊತೆ ಕಳೆದ ಐದು ತಿಂಗಳ ಹಿಂದೆಯಷ್ಟೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲ ದಿನಗಳಲ್ಲೇ ಕೌಟುಂಬಿಕ ಕಲಹದಿಂದ ನೇತ್ರಾವತಿ ತನ್ನ ತವರು ಮನೆ ಸೇರಿದ್ದಳು.ರಾಜಿ ಪಂಚಾಯ್ತಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ವಿಚ್ಚೇದನ ನೀಡಲು ಸಿದ್ದತೆ ನಡೆಸಿ ಈ ಸಂಬಂಧ ಪತಿ ವಿರುದ್ಧ ನೇತ್ರಾವತಿ ಠಾಣೆಗೆ ದೂರು ಕೂಡ ನೀಡಿದ್ದರು.
ಈ ವಿಷಯ ತಿಳಿದ ನವೀನ್ ಬೇಸರಗೊಂಡು ನೇತ್ರಾವತಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇತ್ರಾಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಲ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.