ಮಂಡ್ಯ,ಮಾ.9- ಚಲನಚಿತ್ರವೇ ನನ್ನ ಜೀವನ, ನನಗೆ ಅದರಲ್ಲೇ ಆಸಕ್ತಿ, ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ, ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆಗಳಿಲ್ಲ ಎಂದು ನಟ ನಿರ್ಮಾಪಕ ಡಾಲಿ ಧನಂಜಯ್ ಹೇಳಿದರು.
ಜಿಲ್ಲೆಯ ಕೆರೆಗೋಡಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿಯವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಸಂದರ್ಭಗಳು ಬಂದಿಲ್ಲ. ಇತ್ತೀಚೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೇನೆ. ಅದನ್ನು ಹೊರತುಪಡಿಸಿ ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲೂ ಪ್ರಚಾರಕ್ಕಾಗಿ ನನಗೆ ಆಹ್ವಾನವಿತ್ತು. ಆದರೆ ನಾನು ಭಾಗವಹಿಸಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆಗಳು ಕಡಿಮೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸುವ ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೂ ಶುಭವಾಗಲಿ. ನಾನು ಯಾವುದೇ ಒಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.