Thursday, May 2, 2024
Homeರಾಜ್ಯಬಳ್ಳಾರಿಯಲ್ಲಿ ಕೆಆರ್‌ಪಿಪಿ ಸ್ಪರ್ಧೆ, ಶ್ರೀರಾಮಲುಗೆ ಚಿಂತೆ

ಬಳ್ಳಾರಿಯಲ್ಲಿ ಕೆಆರ್‌ಪಿಪಿ ಸ್ಪರ್ಧೆ, ಶ್ರೀರಾಮಲುಗೆ ಚಿಂತೆ

ಬೆಂಗಳೂರು,ಮಾ.9- ಮುಂಬರುವ ಲೋಕಸಭಾ ಸಭಾ ಚುನಾವಣೆಗೆ ಬಳ್ಳಾರಿ ಸಜ್ಜುಗೊಳ್ಳುತ್ತಿದ್ದು, ಈ ನಡುವಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಜನಾರ್ದನ ರೆಡ್ಡಿಯವರ ಹೇಳಿಕೆ ಮಾಜಿ ಸಚಿವ ಹಾಗೂ ಬಿಜೆಪಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಬಿ.ಶ್ರೀರಾಮುಲು ಅವರಲ್ಲಿ ಕಳವಳನ್ನುಂಟು ಮಾಡಿದೆ. ಬಳ್ಳಾರಿ ಗ್ರಾಮಾಂತರದಿಂದ ಸ್ರ್ಪಧಿಸಿ ಸೋತಿದ್ದ ಶ್ರೀರಾಮುಲು ಅವರಿಗೆ ಬಿಜೆಪಿಯಿಂದ ಲೋಕಸಭೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಆದರೆ ಕಲ್ಯಾಣ ರಾಜ್ಯಪ್ರಗತಿ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಜನಾದರ್ನ ರೆಡ್ಡಿಯವರು ಹೇಳಿದ್ದಾರೆ.

ಒಂದು ವೇಳೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತ ಹಂಚಿಕೆಯಾಗುವ ಭೀತಿ ಶ್ರೀರಾಮುಲುಗೆ ಎದುರಾಗಿದೆ. ಇದು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಆತಂಕಗೊಂಡಿರುವ ಶ್ರೀರಾಮುಲು ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ರೆಡ್ಡಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಬಳ್ಳಾರಿಯಿಂದ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚಿಸಲು ರೆಡ್ಡಿ ಅವರು ಕಳೆದ ವಾರ ಸಭೆ ಕರೆದಿದ್ದರು ಎಂದು ಕೆಆರ್‍ಪಿಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಕೆಆರ್‍ಪಿಪಿ ಆರಂಭಿಸಿದಾಗ ಶ್ರೀರಾಮುಲು ಅವರು ಬೆಂಬಲ ನೀಡದಿರುವ ಬಗ್ಗೆ ಸಭೆಯಲ್ಲಿ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಶ್ರೀರಾಮುಲು ಅವರು ಪಕ್ಷದ ಅಭ್ಯರ್ಥಿ ಮತ್ತು ರೆಡ್ಡಿ ಪತ್ನಿ ಅವರ ಅರುಣಾ ಲಕ್ಷ್ಮಿ ವಿರುದ್ಧ ಕೆಲಸ ಮಾಡಿದ್ದರು. ಈಗ ನಮ್ಮ ಸಹಾಯ ಅಪೇಕ್ಷಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ಅವರು ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಶ್ರೀರಾಮುಲು ಅವರನ್ನು ಬೆಂಬಲಿಸಿದ್ದರು. ಆದರೆ, ಕಳೆದ ಕೆಲವು ವರ್ಷಗಳಿಂದ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಶ್ರೀರಾಮುಲು ರೆಡ್ಡಿ ಪರವಾಗಿ ನಿಲ್ಲಲಿಲ್ಲ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಮ್ಮ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದರು. ಇದೀಗ ಶ್ರೀರಾಮುಲು ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ನಿಲ್ಲುವುದು ಹಾಗೂ ಮತಗಳನ್ನು ವಿಭಜಿಸುವ ರಾಜಕೀಯ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News