Monday, September 16, 2024
Homeರಾಜಕೀಯ | Politicsಪ್ರತ್ಯೇಕ ಪಾದಯಾತ್ರೆಗೆ ನನ್ನ ತಕರಾರು ಇಲ್ಲ : ವಿಜಯೇಂದ್ರ ಸ್ಪಷ್ಟನೆ

ಪ್ರತ್ಯೇಕ ಪಾದಯಾತ್ರೆಗೆ ನನ್ನ ತಕರಾರು ಇಲ್ಲ : ವಿಜಯೇಂದ್ರ ಸ್ಪಷ್ಟನೆ

ಬೆಂಗಳೂರು,ಆ.13- ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದು ನನ್ನ ಕರ್ತವ್ಯ. ಆ ಕೆಲಸವನ್ನು ಸತತವಾಗಿ ಮಾಡ್ತಾ ಬಂದಿದ್ದೇನೆ. ಕೆಲವರು ಪ್ರತ್ಯೇಕ ಪಾದಯಾತ್ರೆ ನಡೆಸುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.ಇದಕ್ಕೆ ನನ್ನ ತಕರಾರು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಶಿವಾಜಿನಗರದ ವಸಂತ ನಗರ ವಾರ್ಡಿನ ಬೂತ್‌ ನಂ.44ರಲ್ಲಿ ಇಂದು ಬೆಳಿಗ್ಗೆ ಹರ್‌ ಘರ್‌ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಪಾದಯಾತ್ರೆ ನಡೆಸುವುದರಿಂದ ಪಕ್ಷಕ್ಕೆ ಶಕ್ತಿ ಸಿಗುತ್ತದೆ ಎಂದರೆ ವರಿಷ್ಠರು ಅದಕ್ಕೆ ಅನುಮತಿ ಕೊಡುತ್ತಾರೆ. ಕೇಂದ್ರದ ವರಿಷ್ಠರನ್ನು ಭೇಟಿ ಮಾಡುತ್ತೇವೆ ಅಂದಿದ್ದಾರೆ, ಭೇಟಿ ಮಾಡಲು ಎಲ್ಲರಿಗೂ ಸ್ವತಂತ್ರವಿದೆ. ಕೇಂದ್ರದ ನಾಯಕರು ಅನುಮತಿ ಕೊಟ್ಟರೆ ಮಾಡಲಿ. ಏನೇ ಮಾಡಿದರೂ ಅದು ಪಕ್ಷಕ್ಕೆ ಪೂರಕವಾಗಿರಬೇಕು, ಸದುದ್ದೇಶದಿಂದ ಇರಬೇಕು ಎಂದು ಹೇಳಿದರು.

ಇನ್ನು ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತಂತೆ ಸಿ.ಪಿಯೋಗೀಶ್ವರ್‌ ತಾವು ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇದು ತಪ್ಪು ಎಂದು ನಾವು ಹೇಳಲ್ಲ. ಅವರು ಕೂಡಾ ಕ್ಷೇತ್ರದಲ್ಲಿ ಅವರದ್ದೇ ಆದ ಹಿಡಿತ ಇಟ್ಕೊಂಡಿದ್ದಾರೆ ಎಂದರು.

ಸಿ.ಪಿ.ಯೋಗೇಶ್ವರ್‌ಗೆ ಅವರಿಗೆ ಬೆಂಬಲಿಗರಿದ್ದಾರೆ, ಕ್ಷೇತ್ರದಲ್ಲಿ ಅವರದ್ದೇ ಆದ ಶಕ್ತಿ ಇದೆ. ಆದರೆ ಎರಡೂ ಪಕ್ಷಗಳೂ ಒಟ್ಟಿಗೆ ಹೋಗಬೇಕು. ಈ ಸಂದರ್ಭದಲ್ಲಿ ಚನ್ನಪಟ್ಟಣ ಅಭ್ಯರ್ಥಿ ಯಾರಾಗಬೇಕು ಎಂದು ಎರಡೂ ಪಕ್ಷಗಳೂ ಒಟ್ಟಿಗೆ ಕೂತು ಚರ್ಚೆ ಮಾಡುತ್ತಾರೆ ಎಂದು ತಿಳಿಸಿದರು.

ಇಷ್ಟು ಮಾತ್ರ ಸತ್ಯ, ಚನ್ನಪಟ್ಟಣ ಕ್ಷೇತ್ರ ಎಚ್‌.ಡಿ.ಕುಮಾರಸ್ವಾಮಿ ಅವರು ಗೆದ್ದಂತಹ ಕ್ಷೇತ್ರ. ದೆಹಲಿಯಲ್ಲಿ ಎರಡೂ ಪಕ್ಷದ ವರಿಷ್ಠರು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಅಲ್ಲೀವರೆಗೂ ಎಲ್ಲರೂ ಸಮಾಧಾನದಿಂದ ಇರಬೇಕು ಎಂದು ಮನವಿ ಮಾಡಿದರು. ಯಾರಿಗೆ ಟಿಕೆಟ್‌ ಎಂದು ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ.

ಡಾ.ಅಶ್ವಥ್‌ನಾರಾಯಣ ನೇತೃತ್ವದ ಸಮಿತಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ವರದಿಯಲ್ಲಿ ಅವರು ಏನು ಕೊಟ್ಟಿದ್ದಾರೋ ಗೊತ್ತಿಲ್ಲ, ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಸಿಬಿಐಗೆ ವಹಿಸಿ: ಮುಡಾ ಪ್ರಕರಣವನ್ನು ರಾಜ್ಯ ಸರ್ಕಾರ ವಿಳಂಬ ಮಾಡದೆ ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಟುಂಬದವರೇ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳು ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ನಿಷ್ಪಕ್ಷಪಾತ ತನಿಖೆ ಸಿಬಿಐನಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸರ್ಕಾರದಿಂದ ಜನೌಷಧ ಕೇಂದ್ರಗಳಿಗೆ ಬ್ರೇಕ್ ಹಾಕುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಇದು ಖಂಡನೀಯ. ರಾಜ್ಯ ಸರ್ಕಾರ ಪ್ರತಿಯೊಂದು ವಿಚಾರದಲ್ಲೂ ಸಂಘರ್ಷದ ಹಾದಿ ತುಳಿಯುತ್ತಿದೆ, ಇದು ದುರಂತ ಬಡವರಿಗೆ ಕಡಿಮೆ ದರದಲ್ಲಿ ಕೇಂದ್ರದಿಂದ ಔಷಧಗಳು ಸಿಗುತ್ತಿವೆ. ಇದು ಪ್ರಧಾನಮಂತ್ರಿಗಳ ಕನಸಿನ ಯೋಜನೆಯಾಗಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಕುರಿತು ಜನಜಾಗೃತಿಗಾಗಿ ಪ್ರತಿಯೊಂದು ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ಹರ್ ಘರ್ ತಿರಂಗ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು, ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನು ನೆನಪಿಸಿ ಕೊಡಬೇಕು. ತ್ಯಾಗ, ಬಲಿದಾನದ ಚರ್ಚೆ ಆಗಬೇಕು ಎಂದು ತಿಳಿಸಿದ್ದಾರೆ. ಅದಕ್ಕಾಗಿ ಯುವಜನತೆಯಲ್ಲೂ ದೇಶಭಕ್ತಿ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮಿಕೊಂಡಿದ್ದೇವೆ ಎಂದರು.

ಸಂಸದ ಪಿ.ಸಿ.ಮೋಹನ್‌, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೂತ್‌ ಸಂಖ್ಯೆ 44ರ ಅಧ್ಯಕ್ಷ ಸಾಗರ್‌, ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಅದೇರೀತಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಯುವಕರಿಂದ ಬೈಕ್‌ ರ್ಯಾಲಿ ಮೂಲಕ ತಿರಂಗ ಯಾತ್ರೆ ನಡೆಸಲಾಗುತ್ತಿದ್ದು, ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಈಗಾಗಲೇ ಆ.11ರಿಂದ 15ರವರೆಗೆ ಸ್ವಾತಂತ್ರ್ಯ ಹೋರಾಟಗಾರರ ಸಾರಕಗಳು, ಪುತ್ಥಳಿಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಾಳೆ ದೇಶದ ವಿಭಜನೆಯ ಕರಾಳ ದಿನದ ನೆನಪನ್ನು ವಿಭಜನೆಯ ಸತಿ ದಿನವಾಗಿ ನೆನಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

RELATED ARTICLES

Latest News