ಬೆಂಗಳೂರು, ಜೂ.8-ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ, ಆರೋಪಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ದಿನ ನಾನು ಕಚೇರಿಗೇ ಹೋಗಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್‌ಐಟಿ ವಿಚಾರಣೆಯಲ್ಲಿರುವ ಆರೋಪಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬುದು ನನ್ನ ಗಮನಕ್ಕೂ ಬಂದಿದೆ. ನಾನು ಓದಿದ ಪ್ರಕಾರ, ಸಚಿವರ ಕಚೇರಿಯಲ್ಲಿ ನಾನು ಒಬ್ಬರನ್ನು ಭೇಟಿ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ದೃಶ್ಯಾವಳಿಗಳನ್ನು ಸಂರಕ್ಷಿಸಿ ಎಂದು ತಿಳಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಸಭೆಯಲ್ಲಿದ್ದರು ಎಂದು ಹೇಳಿಲ್ಲ ಎಂದರು.
ಪ್ರಮಾಣಪತ್ರದ ಆಧಾರದ ಮೇಲೆ ನ್ಯಾಯಾಲಯ ನಿರ್ದೇಶನ ಕೊಟ್ಟು ತನಿಖೆ ಮಾಡಿಸಲಿ. ನನ್ನ ಅಭ್ಯಂತರವಿಲ್ಲ. 24 ರಂದು ನಾನು ಸಚಿವರ ಕಚೇರಿಗೆ ಹೋಗಿಲ್ಲ. ಆಗ ನೀತಿ ಸಂಹಿತೆ ಜಾರಿಯಲ್ಲಿತ್ತು. ವಿಕಾಸಸೌಧದಲ್ಲಿರುವ ತಮ್ಮ ಕಚೇರಿ ಸರ್ಕಾರಿ ಸ್ವತ್ತಾಗಿದೆ. ಅಲ್ಲಿಗೆ ಬಹಳಷ್ಟು ಮಂದಿ ಬರುತ್ತಾರೆ, ಕೂರುತ್ತಾರೆ, ಹೋಗುತ್ತಾರೆ. ನಾನು ಇಲ್ಲದೇ ಇದ್ದಾಗಲೂ ಅನೇಕ ಶಾಸಕರು ಬಂದು ಕುಳಿತು ಮಾತನಾಡಿ ಹೋಗಿರುವುದು ಸಾಮಾನ್ಯ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಅದು ನನ್ನ ಖಾಸಗಿ ಕಚೇರಿಯಲ್ಲ. ಸರ್ಕಾರಿ ಕಚೇರಿ. ಹಾಗಾಗಿ ನಾನು ಸಿಸಿಟಿವಿಯನ್ನು ಪರಿಶೀಲಿಸುವ ಅಗತ್ಯವಿಲ್ಲ. ವಿಚಾರಣೆಗೆ ನನಗೆ ನೋಟೀಸ್ ಕೊಟ್ಟರೆ ನಾನು ಸಹಕರಿಸುತ್ತೇನೆ. ಕಚೇರಿಯಲ್ಲಿ ಅಂತಹ ಚರ್ಚೆಗಳು, ಸಭೆಗಳಾಗಿದ್ದರೆ ತನಿಖೆಯಾಗಲಿ. ಮಾಧ್ಯಮದಲ್ಲಿ ಈ ವಿಚಾರ ಬಂದ ಮೇಲೆ ನನಗೆ ಅರಿವಾಗಿದೆ. ಅದರ ಹೊರತಾಗಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಪ್ರಮಾಣಪತ್ರದ ವಿಷಯ ಹೊರಬರುತ್ತಿದ್ದಂತೆ ನಾನು ವಿಚಾರಣೆ ಮಾಡಿದ್ದೇನೆ. ಆದರೆ ಅಂತಹ ಯಾವುದೇ ಸಭೆಗಳು ನಡೆದಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಅವರನ್ನು ನಾನು ವಿಚಾರಿಸಿದಾಗ ನಿಮನ್ನು ಭೇಟಿ ಮಾಡಲು ನಾನು ಕಚೇರಿಗೆ ಬಂದಿದ್ದೆ. ಅಲ್ಲಿಗೆ ಈಗ ಪ್ರಮಾಣಪತ್ರ ಸಲ್ಲಿಸಿರುವ ಆರೋಪಿತ ಅಧಿಕಾರಿ ಬಂದು ಹಗರಣದ ಬಗ್ಗೆ ಒಂದು ಪತ್ರ ನೀಡಿದ್ದ ಎಂದು ತಿಳಿಸಿದ್ದಾರೆ.
ನನ್ನ ಕಚೇರಿಯಲ್ಲಿ ಏನಾಗಿದೆ ಎಂಬ ಬಗ್ಗೆ ತನಿಖೆಯಾಗಿ ಸತ್ಯಾಂಶ ಹೊರಗೆ ಬರಲಿ ನನ್ನ ಗೈರುಹಾಜರಿಯಲ್ಲಿ ನಡೆದಿರುವುದಕ್ಕೆ ನಾನು ಹೊಣೆಯಲ್ಲ ಎಂದರು.ವಿರೋಧಪಕ್ಷಗಳು ನನ್ನ ರಾಜೀನಾಮೆ ಕೇಳುತ್ತಿರುವುದಲ್ಲಿ ತರ್ಕವೇ ಇಲ್ಲ. ಯಾವ ಆಧಾರದ ಮೇಲೆ ಆ ರೀತಿ ಆಗ್ರಹ ಮಾಡುತ್ತಿದ್ದಾರೆ. ನನಗೂ ಇದಕ್ಕೂ ಸಂಬಂಧವೇ ಇಲ್ಲ. ನಾನು ಈ ಹಿಂದೆ 5 ವರ್ಷಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಯಾವುದೇ ಆರೋಪಗಳಿಲ್ಲ. ಭ್ರಷ್ಟಾಚಾರ, ಹಗರಣಗಳಿಗೆ ನಾನು ತದ್ವಿರುದ್ಧನಾಗಿದ್ದೇನೆ. ಪಾರದರ್ಶಕ ವ್ಯವಸ್ಥೆಯ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.