ಕೊರಟಗೆರೆ,ಏ.16- ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಏನು ಆಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ತಿಳಿಸಿದರು. ಮೈಸೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನನ್ನ ಜೀವನದ ಸುದೀರ್ಘ ಅನುಭವವನ್ನು ಪ್ರಧಾನಿ ನರೇಂದಿ ಮೋದಿ ಅವರ ಮಂದೆ ಹಂಚಿಕೊಂಡಿದ್ದೇನೆ ಎಂದರು.
ಕೊರಟಗೆರೆ ಪಟ್ಟಣದ ಎಂ.ಜಿ.ಪ್ಯಾಲೇಸ್‍ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೃತ್ರಿ ಪಕ್ಷ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸುದೀರ್ಘ 60 ವರ್ಷಗಳ ರಾಜಕೀಯದಲ್ಲಿ 15 ಬಾರಿ ಸ್ಪರ್ಧೆ ಮಾಡಿದ್ದೇನೆ 3 ಬಾರಿ ಸೋತಿದ್ದೇನೆ.
ಮೋದಿಯವರ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಕಾರಣ ಯಾವ ಟ್ರಿಬ್ಯುನಲ್ ನಿಂದ ಬೆಂಗಳೂರಿಗೆ ನೀರಿಲ್ಲ ಎಂದು ಬರೆದಿದ್ದಾರೋ ಆ ವಿಷಯವನ್ನು ಈ ರಾಷ್ಟ್ರದ ಪ್ರಧಾನಿಗಳು ಎಲ್ಲರಿಗೂ ಮನದಟ್ಟು ಆಗುವಂತೆ ಅವರ ಭಾಷಣದಲ್ಲಿ ಸವಿವರವಾಗಿ ಪ್ರಸ್ತಾಪ ಮಾಡಿದರು ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನಾನು ನಿಲ್ಲುವುದಿಲ್ಲ ಎಂದು ಘೋಷಣೆ ಮಾಡಿದ್ದೆ. ನಾನೇನು ತುಮಕೂರಿನಿಂದ ನಿಲ್ಲಬೇಕು ಎಂದು ಇರಲಿಲ್ಲ. ಆದರೆ ಸನ್ನಿವೇಶದ ಒತ್ತಡಕ್ಕೆ ಒಳಗಾಗಿ ಸ್ಪರ್ಧೆ ಮಾಡಬೇಕಾಯಿತು. ತುಮಕೂರಿಗೆ ನೀರು ಕೋಡುವುದಿಲ್ಲ ಎಂಬ ಕಾರಣ ಮುಂದೊಡ್ಡಿ ನನ್ನನ್ನು ಸೋಲಿಸಿದರು. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ.
ನೀರಿನ ವಿಚಾರದಲ್ಲಿ ದಂಧೆಯೂ ನಡೆಯುತ್ತಿದೆ. ಇದು ಮೋದಿಯವರ ಗಮನಕ್ಕೂ ಹೋಗಿದೆ ಎಂದು ತಿಳಿಸಿದರು.ತುಮಕೂರಿನ ಮಹಾಜನರಿಗೆ ಕುಡಿಯಲು ನೀರು ಹರಿಸಿದ ನಾನು ನಿಮ್ಮ ಮುಂದೆ ಕೂತಿದ್ದೇನೆ. ಕಾಂಗ್ರೆಸ್ ಮಹಾನುಭಾವರು ರಾಜ್ಯ ಆಳುತ್ತಿದ್ದಾರೆ. ಹೋರಾಟ ಮಾಡುವ ಶಕ್ತಿ ನನಗೆ ಇದೆ, ದೇವೇಗೌಡರಿಗೆ ವಯಸ್ಸಾಯ್ತು 91 ವರ್ಷ ಎನ್ನುವ ಭಾವನೆ ಇಟ್ಟುಕೊಳ್ಳಬೇಡಿ, ಹಾವೇರಿಗೆ ಹೋಗಿ ನನ್ನ ಪ್ರತಿಮೆ ಇದೆ, 6 ತಿಂಗಳಿಗೆ ನೀರು ಕೊಟ್ಟೆ ಎಂದರು.
ತುಮಕೂರು ಲೋಕಸಬಾ ಕ್ಷೇತ್ರದಲ್ಲಿ ಅಭ್ಯರ್ಥಿ ವಿ.ಸೋಮಣ್ಣ ಸೋತರೆ ಯಾವ ಮೋದಿ ನನ್ನ ನಂಬಿದ್ದಾರೋ ಅವರ ಮುಂದೆ ಹೋಗಿ ನಿಂತು ಕಾವೇರಿ ನೀರಿನ ಬಗ್ಗೆ ಅನ್ಯಾಯ ಸರಿಪಡಿಸುವಂತೆ ಕೇಳುವ ಯೋಗ್ಯತೆ ಇರುವುದಿಲ್ಲ. ಯಾರುಯಾರು ಏನೇನು ಮಾಡುತ್ತಿದ್ದಾರೆ, ಕಾಂಗ್ರೆಸ್‍ನವರು ಏನು ಮಾಡುತ್ತಿದ್ದಾರೆ, ಎಲ್ಲವೂ ಗೊತ್ತಿದೆ. ನಾನು ಕಾವೇರಿ ವಿಚಾರದಲ್ಲಿ ಮೋದಿಯವರನ್ನು ನಂಬಿದ್ದೇನೆ. 1962 ರಿಂದಲೂ ಕಾವೇರಿ ಹೋರಾಟ ಮಾಡಿದ್ದೇನೆ, ಏನಾದರೂ ಒಂದು ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ.
ಸೋಮಣ್ಣ ಗೆದ್ದರೆ ನೀರಾವರಿ ಯೋಜನೆಗೆ ಬೆಂಬಲ ದೊರೆಯುತ್ತದೆ, ಕಳೆದ ಬಾರಿ ನಾನು ಸೋತಿದ್ದಕ್ಕೆ ವ್ಯಥೆ ಪಡುವುದಿಲ್ಲ. ಸೋಮಣ್ಣನವರ ಗೆಲುವು ದೇವೇಗೌಡರ ಗೆಲವು ಎಂದು ತಿಳಿಸಿದರು. ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿರವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇಶಕ್ಕೆ ಸಂದೇಶ ಕೊಟ್ಟಿದ್ದನ್ನು ನೋಡಿದ್ದೇವೆ.
ದೇಶದ ಆಡಳಿತ ಸುಸೂತ್ರವಾಗಿ ನಡೆಯಲು ನರೇಂದ್ರ ಮೋದಿಯವರ ಕಾರ್ಯವೈಖರಿಯೇ ಕಾರಣ, ಮೂರನೇ ಬಾರಿ ಕೂಡ ನರೇಂದ್ರ ಮೋದಿಯವರನ್ನು ಪ್ರದಾನಿಯಾಗಿ ಮಾಡಬೇಕು ಎಂದು ದೇವೇಗೌಡರು ಸಂಕಲ್ಪ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಮಾತನ್ನು ಹೇಳಿದ್ದಾರೆ.
ವರುಣ ಕ್ಷೇತ್ರದಲ್ಲಿ ಒಂದು ಸಾವಿರ ಮನೆಗಳನ್ನು ಕಟ್ಟಿಸಿದ್ದೇವೆ. ನೀವೇ ಶಾಸಕರಾಗಿದ್ದಾಗ ಒಂದು ಕಾರ್ಯಕ್ರಮದಲ್ಲಿ ನನ್ನನ್ನು ಕೊಂಡಾಡಿದ್ದೀರಿ. ಈಗ ಸೋಮಣ್ಣ ಎಲ್ಲಿಯವನು ಎಂದು ಹೇಳಿದ್ದೀರಿ, ನಾನು ಇಲ್ಲಿಯವನು ಸ್ವಾಮೀ, ಕರುನಾಡಿನವನು, ನೀವು ಎಲ್ಲಿಯವರು ಬಾದಾಮಿಗೆ ಯಾಕೆ ಹೋಗಿದ್ರಿ, ಕೊಪ್ಪಳದಲ್ಲಿ ಯಾಕೆ ಸೋತಿರಿ, ನೀವು ರಾಜ್ಯದ ಮುಖ್ಯಮಂತ್ರಿ ಏಳೂವರೆ ಕೋಟಿ ಜನರ ಮುಖ್ಯಮಂತ್ರಿ. ಹೀಗಾಗಿ ಏಕವಚನ ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ, ನಾನು ಕೂಡ ನಿಮ್ಮ ಜೊತೆ ಕೆಲಸ ಮಾಡಿದ್ದೀನಿ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಧಾಕರಲಾಲ್ , ಬಿಜೆಪಿ ಮುಕಂಡ ಅನಿಲ್ ಕುಮಾರ್, ಗೋಪಾಲಯ್ಯ, ಅಂಜಿನಪ್ಪ, ಅಂದಾನಯ್ಯ, ನರೇಂದ್ರಸ್ವಾಮಿ, ನಾರಾಯಣಸ್ವಾಮಿ, ಶಿವರಾಮಯ್ಯ, ಲಕ್ಷ್ಮೀನಾರಾಯಣ್ , ಲಕ್ಷ್ಮಣ್, ನರಸಿಂಹರಾಜು ದರ್ಶನ್, ಪವನ್, ರಘು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.