ಅಂಟಿಗುವಾ, ಜೂ.12- ಕ್ರಿಕೆಟ್ ಶಿಶುಗಳಾದ ನಮೀಬಿಯಾ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ 2021ರ ಟಿ20 ಚಾಂಪಿಯನ್ ಆಸ್ಟ್ರೇಲಿಯಾ ಸೂಪರ್- 8 ಹಂತ ಪ್ರವೇಶಿಸಿದೆ.
ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ಆಡಂ ಝಂಪಾ ಅವರ ಮೋಡಿಗೆ (12ಕ್ಕೆ4) ತಲೆದೂಗಿದ ನಮೀಬಿಯಾ ಆಟಗಾರರು 72 ರನ್‌ಗಳಿಗೆ ತಮ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಗುರಿಯನ್ನು ಆಸ್ಟ್ರೇಲಿಯಾ 5.4 ಓವರ್‌ನಲ್ಲೇ ತಲುಪುವ ಮೂಲಕ 2024ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತಕ್ಕೆ ದಕ್ಷಿಣ ಆಫ್ರಿಕಾ ನಂತರ ಲಗ್ಗೆ ಇಟ್ಟ ಎರಡನೇ ತಂಡವೆನಿಸಿಕೊಂಡಿದೆ.
ನಮೀಬಿಯಾಗೆ ಆರಂಭಿಕ ಆಘಾತ:
ಅಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕ್ರಿಕೆಟ್ ಶಿಶುಗಳಾದ ನಮೀಬಿಯಾ 14 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಆಸೀಸ್ ವೇಗಿಗಳಾದ ಜಾಶ್ ಹೇಝಲ್‌ವುಡ್, ಪ್ಯಾಟ್ ಕಮಿನ್ಸ್ , ಎಲ್ಲೀಸ್ ಅವರ ವೇಗದ ದಾಳಿಗೆ ಸಿಲುಕಿ 7 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಝಂಪಾ ಸ್ಪಿನ್ ಮೋಡಿ:
ನಂತರ ತಮ ಸ್ಪಿನ್ ಜೋಡಿ ಪ್ರದರ್ಶಿಸಿದ ಆಸೀಸ್ ಅನುಭವಿ ಸ್ಪಿನ್ನರ್ ಆಡಂ ಝಂಪಾ ಅವರು ನಮೀಬಿಯಾದ ಕೆಳ ಹಂತದ ಬ್ಯಾಟರ್ಸ್‌ಗಳಿಗೆ ರನ್ ಗಳಿಸಲು ಕಠಿಣವಾಗಿಸಿದರು. ತಮ ಪಾಲಿನ 4 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ನಮೀಬಿಯಾ ಪರ ಮಾರ್ವೆ ಎರ್ಸ್‌ಮಸ್ (36 ರನ್) ಗಳಿಸಿದ್ದರಿಂದ ತಂಡವು 17 ಓವರ್‌ಗಳಲ್ಲಿ 72 ರನ್ ಗಳಿಸಲು ಸಾಧ್ಯವಾಯಿತು.
ಆಸೀಸ್ ಸ್ಫೋಟಕ ಆರಂಭ:
ನಮೀಬಿಯಾ ನೀಡಿದ 73 ರನ್‌ಗಳ ಸುಲಭದ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ಸ್ಫೋಟಕ ಆರಂಭ ಪಡೆಯಿತು. 8 ಎಸೆತಗಳಲ್ಲೇ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 20 ರನ್ ಗಳಿಸಿದ ಡೇವಿಡ್ ವಾರ್ನರ್ ಅವರು ಡೇವಿಡ್ ವೈಸ್‌ಗೆ ವಿಕೆಟ್ ಒಪ್ಪಿಸಿದಾಗ ತಂಡದ ಮೊತ್ತ 1.4 ಓವರ್‌ಗಳಲ್ಲಿ 21 ರನ್‌ಗಳಾಗಿತ್ತು.
ನಂತರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ (34 ರನ್, 17 ಎಸೆತ, 5 ಬೌಂಡರಿ ಹಾಗೂ 2 ಸಿಕ್ಸರ್) ಹಾಗೂ ನಾಯಕ ಮಿಚೆಲ್ ಮಾರ್ಷ್ (18 ರನ್, 9 ಎಸೆತ, 3 ಬೌಂಡರಿ, 1 ಸಿಕ್ಸರ್) 5.4 ಓವರ್‌ಗಳಲ್ಲೇ 73 ರನ್ ಸಿಡಿಸುವ ಮೂಲಕ ತಂಡಕ್ಕೆ ಗೆದ್ದುಕೊಟ್ಟರು. ಈ ಗೆಲುವಿನೊಂದಿಗೆ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, 2024ರ ಟಿ 20 ಸೂಪರ್ 8ರ ಘಟ್ಟಕ್ಕೆ ಅರ್ಹತೆ ಪಡೆದಿದ್ದು, ಚುಟುಕು ವಿಶ್ವಕಪ್ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಮಿಚೆಲ್ ಸ್ಟಾರ್ಕ್‌ಗೆ ವಿಶ್ರಾಂತಿ:
2024ರ ಐಪಿಎಲ್ ಟೂರ್ನಿಯಲ್ಲಿ ತಮ ಸಮಯೋಚಿತ ಬೌಲಿಂಗ್ ಪ್ರದರ್ಶನದಿಂದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಮಿಚೆಲ್ ಸ್ಟಾರ್ಕ್, ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಒಮನ್ ಹಾಗೂ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಸಂಯೋಜನೆ ತೋರಿದ್ದರು. ಆದರೆ ಮುಂದಿನ ಪಂದ್ಯಗಳು ಸವಾಲಿನಿಂದ ಕೂಡಿರುವುದರಿಂದ ನಮೀಬಿಯಾ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಪ್ಯಾಟ್ ಕಮಿನ್‌್ಸ , ಜಾಸ್ ಹೇಝಲ್‌ವುಡ್ ಹಾಗೂ ನಥೇನ್ ಎಲ್ಲೀಸ್ ವೇಗದ ವಿಭಾಗವನ್ನು ಮುನ್ನಡೆಸಿದ್ದರು.