ಬಾಗೇಪಲ್ಲಿ,ಮಾ.21- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಆಮಿಷವೊಡ್ಡಲು ಉಡುಗೊರೆಗಳ ಸಾಗಾಣಿಕೆ ಮಾತ್ರ ನಿಂತಿಲ್ಲ.ಬಾಗೇಪಲ್ಲಿಯ ಆಂಧ್ರ ಗಡಿಯ ಚೆಕ್ ಪೋಸ್ಟ್ ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿಯ ಭಾವಚಿತ್ರವುಳ್ಳ 1 ಲಕ್ಷ ರೂ. ಮೌಲ್ಯದ ವಾಚ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅನಂತಪುರದಿಂದ ಬೆಂಗಳೂರಿಗೆ ಫಾಚ್ರ್ಯೂನ್ ಕಾರಿನಲ್ಲಿ 96 ವಾಚ್‍ಗಳನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದಾಗ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಪರಿಶೀಲಿಸಿದಾಗ ವಾಚ್‍ಗಳು ಪತ್ತೆಯಾಗಿವೆ.
ಕಾರಿನಲ್ಲಿದ್ದ ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ನಾಗೇಂದ್ರ ಮತ್ತು ಗನ್‍ಮ್ಯಾನ್ ಬಿ.ನಾಗೇಂದ್ರ ಮೇಲೆ ಚುನಾವಣಾ ಎಸ್‍ಎಸ್‍ಟಿ 2 ತಂಡ ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ಶಿವಪ್ಪ ಅವರು ಮಾಲು ಸಮೇತ ಬಾಗೇಪಲ್ಲಿ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾಜ್ಯಾದ್ಯಂತ ಕೆಲವು ಭಾಗಗಳಲ್ಲಿ ಅಕ್ರಮ ನಗದು, ಕುಕ್ಕರ್, ಸೀರೆ ಇತ್ಯಾದಿ ವಸ್ತುಗಳ ಸಾಗಾಟ ಕಂಡುಬರುತ್ತಿದೆ. ಚುನಾವಣಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು,ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು ವಾಹನಗಳನ್ನು ಕೂಲಂಕುಷವಾಗಿ ತಪಾಸಣೆ ಮಾಡುತ್ತಿದ್ದು, ದಾಖಲೆಗಳಿಲ್ಲದೆ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.