Monday, September 16, 2024
Homeರಾಜ್ಯಸಿಎಂ-ಸಚಿವರ ಜೊತೆ 16ನೇ ಹಣಕಾಸು ಆಯೋಗದ ಮಹತ್ವದ ಸಭೆ

ಸಿಎಂ-ಸಚಿವರ ಜೊತೆ 16ನೇ ಹಣಕಾಸು ಆಯೋಗದ ಮಹತ್ವದ ಸಭೆ

Important meeting of 16th Finance Commission with CM-Secretary

ಬೆಂಗಳೂರು,ಆ.29- ತೆರಿಗೆ ಹಾಗೂ ಸಂಪನ್ಮೂಲ ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡುವ 16ನೇ ಹಣಕಾಸು ಆಯೋಗ ಕಳೆದ 2 ದಿನಗಳಿಂದ ರಾಜ್ಯದಲ್ಲಿ ಸರಣಿ ಸಭೆಗಳನ್ನು ನಡೆಸಿದ್ದು ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರು, ಯೋಜನಾ ಆಯೋಗ, ಹಣಕಾಸು ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರ ಜೊತೆ ಮಹತ್ವದ ಸಭೆ ನಡೆದಿದೆ.

ಹಣಕಾಸು ಆಯೋಗದ ಮುಂದೆ ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಗಳನ್ನು ಮಂಡಿಸಲು ಹಲವು ತಿಂಗಳುಗಳಿಂದಲೂ ತಯಾರಿ ನಡೆಸಿತ್ತು. ಪ್ರತಿಯೊಂದು ಇಲಾಖೆಯಿಂದಲೂ ಖರ್ಚು ವೆಚ್ಚಗಳ ಹಾಗೂ ಆಸ್ತಿ ಸೃಜನೆಗೆ ಸಂಬಂಧಪಟ್ಟಂತ ಮಾಹಿತಿಗಳನ್ನು ದೃಢೀಕರಿಸಲಾಗಿತ್ತು. ಕಳೆದ ವಾರವೇ 16ನೇ ಹಣಕಾಸು ಆಯೋಗಕ್ಕೆ ರಾಜ್ಯಸರ್ಕಾರದ ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡಲಾಗಿದ್ದು, ಕಳೆದೆರಡು ದಿನಗಳಿಂದ ನಡೆಯುತ್ತಿರುವ ಸರಣಿ ಸಭೆಯಲ್ಲಿ ವಿಸ್ತೃತವಾದ ಚರ್ಚೆಗಳು ನಡೆದಿವೆ.

ಮುಖ್ಯಮಂತ್ರಿಯವರು ರಾಜ್ಯಸರ್ಕಾರದ ಪ್ರತಿಪಾದನೆಗಳನ್ನು ಆಯೋಗದ ಮುಂದೆ ಪ್ರಬಲವಾಗಿ ಮಂಡಿಸಿದ್ದಾರೆ.ಈ ಹಿಂದೆ15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದ ರಾಜ್ಯಕ್ಕೆ ಸುಮಾರು 1.50 ಲಕ್ಷ ಕೋಟಿ ರೂ.ಗಳು ನಷ್ಟವಾಗಿತ್ತು. ಮಧ್ಯಂತರ ಶಿಫಾರಸ್ಸಿನಲ್ಲಿ ಕರ್ನಾಟಕ ಕುರಿತಂತೆ ವ್ಯಕ್ತವಾಗಿದ್ದ ಅನುಕಂಪ ಅಂತಿಮ ವರದಿಯಲ್ಲಿ ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ 11,500 ಕೋಟಿ ರೂ.ಗಳು ಖೋತಾ ಆಗಿತ್ತು.

ಕೇಂದ್ರ ಸರ್ಕಾರ ಜಿಎಸ್‌‍ಟಿ ಸೇರಿದಂತೆ ಇತರೆ ತೆರಿಗೆಯ ಸಂಪನೂಲಗಳನ್ನು ಹಂಚಿಕೆ ಮಾಡಲು ಅನುಸರಿಸುತ್ತಿರುವ ಮಾನದಂಡಗಳ ಕುರಿತಾಗಿಯೇ ಒಂದಿಷ್ಟು ಆಕ್ಷೇಪಗಳು ವ್ಯಕ್ತವಾಗಿವೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಪ್ರಗತಿಪರ ರಾಜ್ಯಗಳು ಜನಸಂಖ್ಯೆ ನಿಯಂತ್ರಣ, ಸಂಪನೂಲ ಕ್ರೂಢೀಕರಣಗಳ ವಿಚಾರದಲ್ಲಿ ಮುಂದಿವೆ. ಅಭಿವೃದ್ಧಿ ವಿಚಾರದಲ್ಲಿಯೂ ರಾಜ್ಯ ಮುಂಚೂಣಿ ಸ್ಥಾನದಲ್ಲಿದೆ.

15ನೇ ಹಣಕಾಸು ಆಯೋಗ ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ದೊರೆಯುತ್ತಿದ್ದ ತೆರಿಗೆಯ ಪಾಲು 10, 11ನೇ ಸ್ಥಾನದಲ್ಲಿತ್ತು. ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಆದರೆ ಸಂಪನೂಲ ಮರುಗಳಿಕೆಯ ವಿಷಯದಲ್ಲಿ 12ನೇ ಸ್ಥಾನದಲ್ಲಿತ್ತು. ಹೀಗಾಗಿ 16ನೇ ಹಣಕಾಸು ಆಯೋಗದ ಶಿಫಾರಸ್ಸಿನಲ್ಲಿ ಹಿಂದಿನ ಅನ್ಯಾಯಗಳು ಮರುಕಳಿಸಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರ ಸರ್ಕಾರ ಕಟ್ಟೆಚ್ಚರ ವಹಿಸಿದೆ.

ರಾಜ್ಯದ ಪರಿಸ್ಥಿತಿ ಅಧ್ಯಯನಕ್ಕಾಗಿ ಆಗಮಿಸಿರುವ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಅವರ ಕುಟುಂಬದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಕುಟುಂಬದ ಸದಸ್ಯರಿಗೆ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶತಾಯಗತಾಯ 16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಪಡೆದುಕೊಳ್ಳುವ ಇರಾದೆಯನ್ನು ಸಿದ್ದರಾಮಯ್ಯನವರ ಸರ್ಕಾರ ಹೊಂದಿದೆ.

ಪಂಚಖಾತ್ರಿ ಯೋಜನೆಗಳ ಜಾರಿಯಿಂದ ಆರ್ಥಿಕ ಒತ್ತಡಕ್ಕೆ ಸಿಲುಕಿರುವ ಸರ್ಕಾರಕ್ಕೆ ಕೇಂದ್ರದ ನೆರವು ಅತ್ಯಗತ್ಯ ಎಂಬ ಪರಿಸ್ಥಿತಿ ಇದೆ. ಆದರೆ ಈವರೆಗಿನ ಹಲವು ಬೆಳವಣಿಗೆಗಳಿಂದ ಕೇಂದ್ರಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿದೆ.

ಬರ ಪರಿಹಾರಕ್ಕಾಗಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಇತ್ತೀಚೆಗೆ ನೆರೆ ಪರಿಸ್ಥಿತಿಯಿಂದಾಗಿ ಒಂದಷ್ಟು ಹಾನಿಯಾಗಿದೆ. ಅದರ ಪರಿಹಾರ ಬಿಡುಗಡೆಗೂ ಈವರೆಗೂ ಯಾವುದೇ ಪ್ರಕ್ರಿಯೆಗಳು ಕಂಡುಬಂದಿಲ್ಲ.ಹೀಗಾಗಿ 16ನೇ ಹಣಕಾಸು ಆಯೋಗದ ಸಹಾನುಭೂತಿಯನ್ನು ಗಿಟ್ಟಿಸಲು ರಾಜ್ಯಸರ್ಕಾರ ಇನ್ನಿಲ್ಲದ ಸರ್ಕಸ್‌‍ ನಡೆಸುತ್ತಿದೆ.

RELATED ARTICLES

Latest News