ಚನ್ನಪಟ್ಟಣ,ಅ.28- ಹೈ ವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಿನ್ನೆಯಿಂದ ಬಿರುಸಿನ ಪ್ರಚಾರ ಆರಂಭಿಸಿವೆ. ಕ್ಷೇತ್ರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು ಪ್ರತ್ಯೇಕವಾಗಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಕುಮಾರಸ್ವಾಮಿಯವರು, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈತ್ರಿ ಅಭ್ಯರ್ಥಿ ಪರವಾಗಿ ಇಂದು ಹೊಂಗನೂರು ಮತ್ತು ಮಳೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ಇಂದು ಬೆಳಿಗ್ಗೆ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಿಂದ ಮತಯಾಚನೆಯನ್ನು ಪ್ರಾರಂಭಿಸಿದ ಕುಮಾರಸ್ವಾಮಿ ಮತ್ತು ಯದುವೀರ್ ಅವರು ಮಧ್ಯಾಹ್ನ ಕೂಡ್ಲೂರು ಗ್ರಾಮ, ನೀಲಕಂಠನಹಳ್ಳಿ, ಮಸಿಗೌಡನದೊಡ್ಡಿ, ಸುಣ್ಣಘಟ್ಟ ಗ್ರಾಮ, ನೀಲಸಂದ್ರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು. ಸಂಜೆ ಮೊಳೆದೊಡ್ಡಿ, ಕೋಡಿಪುರ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಎನ್‌ಡಿಎ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ನಿನ್ನೆ ಮೂರು ಪಂಚಾಯಿತಿ ವ್ಯಾಪ್ತಿಯ 16 ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದರು. ಇಂದು ಕೋಡಂಬಳ್ಳಿ, ಜೆ.ಬ್ಯಾಡರಹಳ್ಳಿ, ವೈಟಿಹಳ್ಳಿ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ಕೋಡಂಬಳ್ಳಿಯಿಂದ ತಮ್ಮ ಚುನಾವಣಾ ಪ್ರಚಾರವನ್ನು ನಿಖಿಲ್ ಕುಮಾರಸ್ವಾಮಿ ಆರಂಭಿಸಿದರು. ಬಳಿಕ ಶ್ಯಾನುಬೋಗನಹಳ್ಳಿ, ವಡ್ಡರಹಳ್ಳಿ, ಬಾಚಹಳ್ಳಿ, ಹೊನ್ನಿಗನಹಳ್ಳಿ, ಕಾರೆಕೊಪ್ಪ, ಜೆ.ಬ್ಯಾಡರಹಳ್ಳಿ, ಮಾದೇಗೌಡನದೊಡ್ಡಿ, ಜಗದಾಪುರ, ಕಲ್ಲಾಪುರ, ಸಿದ್ದಾಪುರ, ಗುವಾಪುರ, ನಿಡಗೋಡಿ, ಸಾಮಂದಿಪುರಗಳಲ್ಲಿ ಮಧ್ಯಾಹ್ನದವರೆಗೂ ಪ್ರಚಾರ ನಡೆಸಿ ಈ ಬಾರಿ ತಮಗೆ ಮತದಾರರು ಆಶೀರ್ವಾದ ಮಾಡುವಂತೆ ಕೋರಿದರು.
ಸಂಜೆ ನೆಲಮಾಕನಹಳ್ಳಿ, ಕಾಡಂಕನಹಳ್ಳಿ, ವೈಟಿಹಳ್ಳಿ, ಹಳೆಹಳ್ಳಿ, ಯಲಿಯೂರು, ಬಾಣಂತಹಳ್ಳಿ, ಮಂಚೇಗೌಡನದೊಡ್ಡಿ, ಅಂಚಿಪುರ, ಕರಲಹಳ್ಳಿ, ಉಚ್ಚಯ್ಯನದೊಡ್ಡಿ, ಕೊಂಡಾಪುರ ಹಾಗೂ ಹುಣಸೂರುಗಳಲ್ಲಿ ಇಂದು ರಾತ್ರಿವರೆಗೂ ಪ್ರಚಾರ ಕೈಗೊಳ್ಳುವ ಕಾರ್ಯಕ್ರಮವಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಪ್ರತ್ಯೇಕವಾಗಿ ಕೈಗೊಂಡ ಪ್ರಚಾರ ಸಭೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಾಯಕರು, ಮುಖಂಡರು, ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.