ಉಪಚುನಾವಣೆ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

Spread the love

ಹುಬ್ಬಳ್ಳಿ, ಮೇ.14- ಕುಂದಗೋಳ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿರುವ ಚುನಾವಣಾ ಆಯೋಗವು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಎಫ್ ಎಸ್ ಟಿ ಅಧಿಕಾರಿಗಳ ತಂಡ ನಿನ್ನೆ ರಾತ್ರಿ 9.30 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಹುಬ್ಬಳ್ಳಿ ನಗರದ ವಿವಿಧ ಪ್ರತಿಷ್ಠಿತ ಹೋಟೆಲುಗಳ ಮೇಲೆ ದಾಳಿ ನಡೆಸಿದೆ.

ರಾತ್ರಿ 10 ಗಂಟೆಯ ಸುಮಾರಿಗೆ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್‍ನ ಕೊಠಡಿ ಸಂಖ್ಯೆ 307 ರಲ್ಲಿ ಇರಿಸಲಾಗಿದ್ದ , ಸಿ.ಎಸ್.ಶಿವಳ್ಳಿ ಅವರ 11 ಭಾವಚಿತ್ರಗಳು, ಬಂಗಾರದ ಬಣ್ಣ ಲೇಪಿಸಿರುವ 50 ಅರಿಷಿಣ, ಕುಂಕುಮದ ಬಟ್ಟಲುಗಳು, ಕುಂದಗೋಳ ವಿಧಾನಸಭಾ ಕ್ಷೇತ್ರದ ಭಾಗ. ಸಂಖ್ಯೆ 51 ರಿಂದ 57 ರವರೆಗಿನ ಒಟ್ಟು 7 ಮತದಾರರ ಪಟ್ಟಿಗಳು ಹಾಗೂ ಕಾಂಗ್ರೆಸ್ ಪಕ್ಷದ ಚಿಹ್ನೆ ಹೊಂದಿದ್ದ ಕೇಸರಿ, ಬಿಳಿ, ಹಸಿರು ವರ್ಣದ ಟೊಪ್ಪಿಗೆಯೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಇವುಗಳನ್ನು ಸಂಗ್ರಹಿಸಲಾಗಿತ್ತು . ಘಟನೆಗೆ ಸಂಬಂಧಿಸಿದಂತೆ ಶಿವಕುಮಾರ್ ಚಂದ್ರಶೇಖರ್ ಗೋಕಾವಿ ಎಂಬುವವರ ವಿರುದ್ಧ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Facebook Comments