Thursday, May 23, 2024
Homeರಾಜ್ಯಉಷ್ಣಾಂಶ ಹೆಚ್ಚಳ : ರಾಜ್ಯದಲ್ಲಿ ಹಾವು ಕಡಿತದ ಪ್ರಕರಣಗಲ್ಲಿ ದಾಖಲೆ ಏರಿಕೆ

ಉಷ್ಣಾಂಶ ಹೆಚ್ಚಳ : ರಾಜ್ಯದಲ್ಲಿ ಹಾವು ಕಡಿತದ ಪ್ರಕರಣಗಲ್ಲಿ ದಾಖಲೆ ಏರಿಕೆ

ಬೆಂಗಳೂರು,ಮೇ.15- ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಬೆನ್ನಲ್ಲೇ ಹಾವುಗಳ ಕಡಿತ ಪ್ರಮಾಣ ಹೆಚ್ಚಾಗಿ ಅಪಾರ ಸಾವು-ನೋವು ಸಂಭವಿಸಿದೆ.ಉಷ್ಣಾಂಶ ಏರಿಕೆಯಿಂದ ಬಿಲದಲ್ಲಿ ಇರಲಾರದೆ ಹೊರ ಬಂದಿರುವ ಹಾವುಗಳು ಕಂಡ ಕಂಡವರಿಗೆ ಕಚ್ಚಿರುವ ಪ್ರಕರಣಗಳು ಹೆಚ್ಚಾಗಿವೆ. ಇನ್ನೊಂದೆಡೆ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧಿ ಕೊರತೆಯು ಕಂಡು ಬಂದಿದೆ.

ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ವರ್ಷ ಹಾವು ಕಡಿತಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿರುವುದು ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಗರಿಷ್ಠ ಸಂಖ್ಯೆಯಲ್ಲಿ ಹಾವುಗಳ ಕಡಿತದ ಪ್ರಮಾಣ ಹೆಚ್ಚಾಗಿದೆ.. ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 2316 ಹಾವು ಕಡಿತದ ಪ್ರಕರಣ ಕಂಡು ಬಂದಿದ್ದು 18 ಜನರು ಹಾವು ಕಡಿತದಿಂದ ಸಾವಿಗೆ ಬಲಿಯಾಗಿದ್ದಾರೆ..

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 46 ಜನರು ಹಾವು ಕಡಿತದಿಂದ ಸಾವಿಗೀಡಾಗಿದ್ದಾರೆ. ಕೆಲವರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮತಪಟ್ಟಿದ್ದರೆ ಕೆಲವರು ಔಷಧ ಸಿಗದೆ ಸಾವನ್ನಪ್ಪಿದ್ದರು ಎನ್ನಲಾಗಿದೆ. ಮೂರು ವರ್ಷಗಳಲ್ಲಿ 13 ಸಾವಿರ ಜನರು ಹಾವು ಕಡಿತಕ್ಕೆ ಒಳಗಾಗಿದ್ದು, 46 ಮಂದಿ ಮತಪಟ್ಟಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹೀಗಿದ್ದರೂ, ಹಾವು ಕಡಿತದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹವು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆರೋಪ ಕೇಳಿ ಬರ್ತಿದೆ ಎನ್ನುತ್ತಾರೆ ಪ್ರಾಣಿ ಪರಿಪಾಲಕ ಪಸನ್ನ ಅವರು.

ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತದ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳಬೇಕು. ಆದರೆ, ರಾಜ್ಯಾದ್ಯಂತ ಹಾವು ಕಡಿತದ ಔಷಧಿ ಆಸ್ಪತ್ರೆಗಳಲ್ಲಿ ಕೊರತೆ ಕಾಡುತ್ತಿದೆ. ಹಾವು ಕಡಿತದ 83,620 ವಯಲ್‌ ಚುಚ್ಚುಮದ್ದಿಗೆ ಇತ್ತೀಚೆಗೆ ಆರೋಗ್ಯ ಇಲಾಖೆ ಟೆಂಡರ್‌ ಆಹ್ವಾನಿಸಿತ್ತು ಆದರೆ ಬೇಡಿಕೆಯಷ್ಟು ಔಷಧಿ ಪೂರೈಕೆಯಾಗಿಲ್ಲ ಎಂದು ತಿಳಿದುಬಂದಿದೆ.

2021ರಲ್ಲಿ 950 ಕಡಿತ ಪ್ರಕರಣಗಳು ದಾಖಲಾಗಿದ್ದು ಯಾರೊಬ್ಬರು ಮೃತಪಟ್ಟಿರಲಿಲ್ಲ. 2022ರಲ್ಲಿ 3439 ಕಡಿತದಿಂದ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. 2023ರಲ್ಲಿ 6596 ಕಡಿತ ಪ್ರಕರಣಗಳಲ್ಲಿ 19 ಮಂದಿ ಜೀವ ತೆತ್ತಿದ್ದರು ಈ ವರ್ಷ ಆರು ತಿಂಗಳು ಕಳೆಯುವುದರೊಳಗೆ 2316 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು ಈಗಾಗಲೇ 18 ಮಂದಿ ಅಸು ನೀಗಿದ್ದಾರೆ.

ಕಳೆದ ಫೆಬ್ರವರಿ 12ರಂದು ರಾಜ್ಯ ಸರಕಾರ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದೆ. ರಾಜ್ಯದ ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಹಾವು ಕಡಿತದ ಎಲ್ಲ ಪ್ರಕರಣಗಳನ್ನು ಅಂದರೆ ಒಳ ರೋಗಿಗಳು, ಹೊರ ರೋಗಿಗಳು ಮತ್ತು ಸಾವಿನ ಪ್ರಕರಣಗಳೇ ಆಗಿರಲಿ ಸಮಗ್ರ ಆರೋಗ್ಯ ಮಾಹಿತಿ ನೋಂದಾಯಿಸಬೇಕು ಎಂದು ಆದೇಶಿಸಿದೆ. ಕರ್ನಾಟಕದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೂ ಸಾವಿನ ಸಂಖ್ಯೆ ಮಾತ್ರ ತಗ್ಗಿಲ್ಲ ಎನ್ನುವಂತಾಗಿದೆ.

RELATED ARTICLES

Latest News