ಬೆಂಗಳೂರು, ನ.10- ಬರದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುತ್ತಿರುವ ಮಾನವ ದಿನಗಳ ಉದ್ಯೋಗವನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಲ್ಲಿಂದ ಒಪ್ಪಿಗೆ ಸಿಗಬೇಕು, ಇಲ್ಲವಾದರೆ ನಾವೇ ಉದ್ಯೋಗ ದಿನಗಳನ್ನು ಹೆಚ್ಚಿಸುವ ಚಿಂತನೆ ನಡೆಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಭಾದಿತ ಎಂದು ಘೋಷಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಉದ್ಯೋಗ 100ದಿನಗಳಿಗೆ ಸೀಮಿತವಾಗಿದೆ. ಅದನ್ನು 150 ದಿನಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಕೇಂದ್ರ ಅನುಮತಿ ನೀಡಬೇಕು, ಇಲ್ಲವಾದರೆ ರಾಜ್ಯ ಸರ್ಕಾರವೇ 150 ದಿನಗಳಿಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ಆದರೆ ಅದಕ್ಕೂ ಮೊದಲು ಕೇಂದ್ರ ಸರ್ಕಾರ ತಮ್ಮಿಂದ ಆಗುವುದಿಲ್ಲ ಎಂದು ಹೇಳಬೇಕು ಎಂದರು.
ಬಿಜೆಪಿ, ಜನತಾದಳಕ್ಕೆ ಈಗ ಅನುಕಂಪ ಬಂದು ಬರ ಅಧ್ಯಯನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಉತ್ತಮ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಕೇಂದ್ರ ಸ್ವೀಕರಿಸಿ, ಅಧಿಕಾರಿಗಳ ತಂಡವನ್ನು ಕಳುಹಿಸಿಕೊಟ್ಟಿತ್ತು. ಕೇಂದ್ರ ತಂಡವೂ ಇಲ್ಲಿ ಅಧ್ಯಯನ ಮಾಡಿ ಹೋಗಿದೆ. ಈಗ ಬಿಜೆಪಿ-ಜೆಡಿಎಸ್‍ನವರು ಕಾಟಾಚಾರಕ್ಕೆ ಹೋಗಿ ಗಿಡ ನೋಡುವುದಲ್ಲ, ನಾವು ಈಗಾಗಲೇ ಗಿಡ ನೋಡಿದ್ದೇವೆ. ಬಿಜೆಪಿಯ 66. ಜೆಡಿಎಸ್‍ನ 19 ಶಾಸಕರು ಹಾಗೂ ಬಿಜೆಪಿಯ 26 ಜನ ಸಂಸದರು ದೆಹಲಿಗೆ ಹೋಗಿ ಕೇಂದ್ರ ಸಚಿವರು, ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯಕ್ಕೆ ಪರಿಹಾರ ಕೊಡಿಸಲಿ ಎಂದು ಒತ್ತಾಯಿಸಿದರು.
ಸಂಪೂರ್ಣ ಕಣ್ಣು ಕಸಿ ಮಾಡುವಲ್ಲಿ ಅಮೆರಿಕ ವೈದ್ಯರು ಯಶಸ್ವಿ
ವಿರೋಧ ಪಕ್ಷಗಳು ರಾಜಕಾರಣ ಮಾಡಲಿ ಅಭ್ಯಂತರ ಇಲ್ಲ, ರಾಜ್ಯದ ಹಿತಕ್ಕೆ ಬದ್ಧರಾಗಿದ್ದೇವೆ ಎಂದಾದರೆ ಮೊದಲು ಪರಿಹಾರ ಕೊಡಿಸಿ, ಉದ್ಯೋಗ ಖಾತ್ರಿಯಡಿ 150 ದಿನಗಳನ್ನು ಮಂಜೂರು ಮಾಡಿಸಿ ಎಂದರು. ಬರ ಅಧ್ಯಯನ ನಡೆಸುವವರು ತಮ್ಮಿಂದ ರಾಜ್ಯಕ್ಕೆ ಏನು ಅನುಕೂಲವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಪರಿಹಾರಕ್ಕಾಗಿ ಕೇಂದ್ರದ ಬಲಿ ಭಿಕ್ಷೆ ಬೇಡುತ್ತಿಲ್ಲ. ಕಾನೂನು ಪ್ರಕಾರ ಪರಿಹಾರ ನೀಡುವ ಬದ್ಧತೆ ಕೇಂದ್ರ ಸರ್ಕಾರದ ಮೇಲಿದೆ. ಅದರಂತೆ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದರು.
ರಾಜ್ಯ ಸರ್ಕಾರ 800 ಕೋಟಿ ಹಣ ಒದಗಿಸಿದ್ದು, ಅದನ್ನು ಕುಡಿಯುವ ನೀರು, ಮೇವು ಸರಬರಾಜಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಸೇರಿ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದರು.
ತೆಲಂಗಾಣದ ವಿಧಾನಸಭೆ ಚುನಾವಣೆಗೆ ರಾಜ್ಯ ಸರ್ಕಾರದ ನಾಲೈದು ಜನ ಸಚಿವರನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚು ಸಚಿವರನ್ನು ನಿಯೋಜನೆ ಮಾಡಿಲ್ಲ. ಕಂದಾಯ ಸಚಿವರನ್ನು ತೆಲಂಗಾಣ ಚುನಾವಣೆಗೆ ನಿಯೋಜಿಸಲಾಗಿತ್ತು. ರಾಜ್ಯದಲ್ಲಿ ಬರ ಇರುವುದರಿಂದ ಅವರಿಗೆ ವಿನಾಯಿತಿ ನೀಡಲಾಗಿದೆ. 40 ಮಂದಿ ಶಾಸಕರನ್ನು ನಿಯೋಜಿಸಲಾಗಿದೆ. ಅವರಲ್ಲಿ ಅನಾರೋಗ್ಯದ ಕಾರಣಕ್ಕೆ ಎನ್.ವೈ.ಗೋಪಾಲಕೃಷ್ಣ ಸೇರಿ ಮೂರು ನಾಲ್ಕು ಜನ ಹೋಗುತ್ತಿಲ್ಲ. ಉಳಿದ ಎಲ್ಲರೂ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಬಿಜೆಪಿಯವರು ಕೂಡ ಚುನಾವಣೆಗೆ ರಾಜ್ಯದ ನಾಯಕರನ್ನು ನಿಯೋಜನೆ ಮಾಡಿದ್ದರು ಎಂದರು.
ನಾನು ಇಂದು ವಿಜಯವಾಡ ಮೂಲಕ ತೆಲಂಗಾಣಕ್ಕೆ ಹೋಗುತ್ತಿದ್ದೇನೆ. ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಾಳೆ ಶ್ರೀಶೈಲ ದೇವಸ್ಥಾನಕ್ಕೆ ಹೋಗಿ ನಾಡಿದ್ದು ವಾಪಾಸ್ ಬರುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಹಿಂದುಳಿದ ವರ್ಗಗಳಿಂದ ನಡೆಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಮರು ಸಮೀಕ್ಷೆ ನಡೆಸಬೇಕು ಎಂದು ವೀರಶೈವ ಲಿಂಗಾಯಿತ ಮಹಾ ಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕುರಿತು ಬೇರೊಂದು ದಿನ ಚರ್ಚೆ ಮಾಡುವುದಾಗಿ ಹೇಳಿದ ಡಿ.ಕೆ.ಶಿವಕುಮಾರ್, ಸದಸ್ಯಕ್ಕೆ ಬರ ಹಾಗೂ ರಾಜ್ಯದ ಇತರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಕಾಂಗ್ರೆಸ್‍ನಲ್ಲಿ ಯಾವ ಗೊಂದಲವೂ ಇಲ್ಲ. ಶಿವಮೊಗ್ಗ ರಾಜಕಾರಣದ ವಿಷಯವಾಗಿ ಯಾವುದೇ ವಿಚಾರಗಳಿದ್ದರೂ ತಮ್ಮೊಂದಿಗೆ ಚರ್ಚೆ ಮಾಡಬಹುದು, ಅದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳಬೇಕು, ಅಗಲ ಇರುವ ಪುಟ್‍ಪಾತ್‍ನ ಪಕ್ಕದಲ್ಲಿ ನಿಂತು ವ್ಯಾಪಾರ ಮಾಡಿಕೊಂಡರೆ ಅಭ್ಯಂತರ ಇಲ್ಲ. ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಮಲ್ಲೇಶ್ವರಂ, ಮಡಿವಾಳದಂತಹ ಪ್ರದೇಶಗಳಲ್ಲಿ ಇದರಿಂದ ತೊಂದರೆಯಾಗುತ್ತಿದೆ. ಅಧಿಕಾರಿಗಳು ಫೋಟೋ ವಿಡಿಯೋ ಸಹಿತಿ ನನಗೆ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಸೂಚನೆ ನೀಡಿದೆ, ಅದರ ಆಧಾರದ ಮೇಲೆ ಪಾಲಿಕೆ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಇಲ್ಲಿ ಪಕ್ಷಪಾತ ಇಲ್ಲ. ಎಲ್ಲಾ ಕಡೆ ಒಂದೇ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಲೋಕ ಚುನಾವಣೆಗೆ ಬಿಜೆಪಿ ರಣತಂತ್ರ, 12 ಹಾಲಿ ಸಂಸದರಿಗೆ ಕೊಕ್
ಬೀದಿ ಬದಿ ವ್ಯಾಪಾರಿಗಳು ತಮ್ಮನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ, ಅಪಘಾತಗಳಾಗುತ್ತಿವೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ನಮ್ಮ ಅಕ್ಷೇಪ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಹಿಂದೊಮ್ಮೆ ಅವರೊಂದಿಗೆ ಚರ್ಚೆ ನಡೆಸಿದ್ದೆ, ಮತ್ತೊಮ್ಮೆಯೂ ಚರ್ಚೆ ಮಾಡುತ್ತೇನೆ. ಅವರ ಜೀವನವೂ ನಡೆಯಬೇಕು, ಅವರಿಗೆ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವರ ವೃತ್ತಿ ಬಿಡುವುದಿಲ್ಲ. ಸುಮ್ಮನ್ನೆ ನಮ್ಮನ್ನು ಕೆಣಕುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.