ನವದೆಹಲಿ,ಆ.13- ದೇಶದ 78ನೇಸ್ವಾತಂತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿರುವಂತೆ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳನ್ನು ಪ್ರಧಾನಿ ಕಾರ್ಯಾಲಯ ಅತಿಥಿಗಳನ್ನಾಗಿ ಆಹ್ವಾನಿಸಿದೆ. ಕರ್ನಾಟಕದ ಗದಗ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಾದ ಸತೀಶ್ ಕನ್ನೇರ್ ಹಾಗೂ ಆದಿತ್ಯ ಕೊರವರ ಅವರನ್ನು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗಿದೆ.
ಕೇಂದ್ರ ಸರ್ಕಾರದ ಮೇರಿ ಮಾಟಿ, ಮೇರಾ ದೇಶ ಕಾರ್ಯಕ್ರಮವನ್ನು ಕಾಲೇಜಿನ ಎನ್‌ಎಸ್‌ಎಸ್ ಘಟಕ ಯಶಸ್ವಿ ಮಾಡುತ್ತ ಬಂದಿದೆ. ಅಮೃತ ವಾಟಿಕಾ ಕಾರ್ಯಕ್ರಮದಡಿ, 50 ಗಿಡಗಳನ್ನು ನೆಟ್ಟು ಸತೀಶ್ ಕನ್ನೇರ್ ಹಾಗೂ ಆದಿತ್ಯ ಕೊರವರ ಎಂಬ ವಿದ್ಯಾರ್ಥಿಗಳು ಪೋಷಿಸಿದ್ದಾರೆ. ಇದನ್ನು ಗಮನಿಸಿ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಕಾಲೇಜಿನ ವತಿಯಿಂದ ಒಂದು ವರ್ಷದಿಂದ ಅಮೃತ ವಾಟಿಕಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದೆ. ಎನ್‌ಎಸ್‌ಎಸ್ ಘಟಕದಿಂದ ಕಾಲೇಜಿನ ಮುಂದೆ 50 ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲಾಗಿದೆ. ಆ ಗಿಡಗಳನ್ನು ಪೋಷಣೆ ಮಾಡುವುದನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಅಪ್ರೋಡ್ ಮಾಡಲಾಗಿದೆ.
100 ವಿದ್ಯಾರ್ಥಿಗಳ ಪೈಕಿ ಸತೀಶ್ ಹಾಗೂ ಆದಿತ್ಯ ಎಂಬ ವಿದ್ಯಾರ್ಥಿಗಳು ಬಹಳ ಅಚ್ಚುಕಟ್ಟಾಗಿ ಗಿಡಗಳನ್ನು ಬೆಳೆಸಿದ್ದರು. ಇದನ್ನು ಗಮನಿಸಿ ಅವರಿಗೆ ಪ್ರಧಾನಿ ಕಚೇರಿಯಿಂದ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಎನ್‌ಎಸ್‌ಎಸ್ ಘಟಕದ ಶಿಕ್ಷಕರು, ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಸಮಯದಲ್ಲಿ ವಿದ್ಯಾರ್ಥಿಗಳು ಮಹಾಗನಿ ಹಾಗೂ ತಬೀಬ್ ರೋಜಾ ಜಾತಿಯ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 24 ಜನರಿಗೆ ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದಿದೆ. ಆ ಪೈಕಿ ಗದಗ ಜಿಲ್ಲೆಯ ಸತೀಶ್ ಮತ್ತು ಆದಿತ್ಯರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನ ಬಂದಿರುವುದು ಹೆಮೆ ತರುವ ವಿಚಾರ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಎಸ್‌ಎಸ್ ಘಟಕದ ನೋಡಲ್ ಅಧಿಕಾರಿ ಶ್ರೀನಿವಾಸ ಬಡಿಗೇರ ಅವರು, ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳ ಕೆಲಸ ಕಾರ್ಯವನ್ನು ಪ್ರಧಾನಿಗಳು ಮೆಚ್ಚಿ, ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಸಂತಸ ತಂದಿದೆ. ಅದಕ್ಕೆ ಹೇಳೋದು ಒಂದು ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದಿದ್ದಾರೆ.