ಬೆಂಗಳೂರು,ಆ.8- ಸ್ವಾತಂತ್ರೋತ್ಸವದ ಅಂಗವಾಗಿ ನಗರದ ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿರುವ 216ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮ್ಮದ್‍ಖಾನ್, ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಉದಯ್ ಗರುಡಾಚಾರ್, ರಾಜು ಸೇಠ್ ಮತ್ತು ಅಜಯ್‍ಸಿಂಗ್, ವಿಧಾನಪರಿಷತ್ ಸದಸ್ಯರಾದ ವೆಂಕಟೇಶ್, ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.
ಈ ಬಾರಿಯ ಸ್ವಾತಂತ್ರ್ಯ ದಿನೋತ್ಸವಕ್ಕೆ ಸಂಸತ್ ಭವನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ಪುಷ್ಪಾಲಂಕಾರದ ಮೂಲಕ ನಿರ್ಮಿಸಲಾಗಿದೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಜೀವನ ಮತ್ತು ಹೋರಾಟಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ. ಅವರ ಹುಟ್ಟು, ಕೊಡುಗೆಗಳು, ಸಾಮಾಜಿಕ ನ್ಯಾಯದ ನಿಲುವುಗಳು ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಹೇಗೆ, ಸಂವಿಧಾನ ರಚನೆ ಮಾಡಿದ್ದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕಿದೆ. 1949ರ ನವೆಂಬರ್ 25 ರಂದು ಸಂವಿಧಾನ ಅಂಗೀಕಾರಗೊಳ್ಳುವ ಹಿಂದಿನ ದಿನ ಅಂಬೇಡ್ಕರ್ ಐತಿಹಾಸಿಕ ಭಾಷಣ ಮಾಡಿದ್ದರು. ಯಾವ ರೀತಿ ಸರ್ಕಾರ ಇರಬೇಕು, ಎಂಥವರ ಕೈಲಿ ಆಡಳಿತ ಇರಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಅಂಬೇಡ್ಕರ್ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಇಂದು ನಾವು ಎಂತಹ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಇರಬೇಕು ಎಂಬ ನಿಲುವನ್ನು ಅಂಬೇಡ್ಕರ್ ಹೊಂದಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು. ಲಾಲ್‍ಬಾಗ್‍ನಲ್ಲಿ ಅಂಬೇಡ್ಕರ್‍ರ ಬಾಲ್ಯದಿಂದ ಎಲ್ಲಾ ಹಂತದ ಭಾವಚಿತ್ರಗಳನ್ನೂ ಪ್ರತಿಕೃತಿಯಲ್ಲಿ ಅಳವಡಿಸಲಾಗಿದೆ. ಸುಮಾರು 12 ಲಕ್ಷ ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸುವ ಸಾಧ್ಯತೆ ಇದೆ ಎಂದು ಹೇಳಿದರು.
30 ಲಕ್ಷ ವಿವಿಧ ಬಗೆಯ ಹೂಗಳಿಂದ ಪುಷ್ಪಾಲಂಕಾರ ಮಾಡಲಾಗಿದೆ. ಬಾಲ್ಯ, ವಿದ್ಯಾಭ್ಯಾಸ, ಯೌವ್ವನ, ಹೋರಾಟ ಈ ಎಲ್ಲದರ ಮಾಹಿತಿಯೂ ಇಲ್ಲಿ ಲಭ್ಯವಿದೆ ಎಂದರು. ಅಂಬೇಡ್ಕರ್‍ರವರ ಸಂವಿಧಾನ ಸದಾ ಕಾಲ ಪ್ರಸ್ತುತ ಎಂದರು. ಇದೇ ವೇಳೆ ಅಂಬೇಡ್ಕರ್‍ರವರ ಮೊಮ್ಮಗ ಯಶವಂತ್ ಭೀಮರಾವ್ ಅಂಬೇಡ್ಕರ್ ಅವರನ್ನು ಸನ್ಮಾನಿಸಲಾಯಿತು.