ಕೌಲಾಲಪುರಂ, ಡಿ.22 ಅಲ್ಪ ಮೊತ್ತ (117 ರನ್) ವನ್ನು ಸಮರ್ಥವಾಗಿ ನಿಭಾಯಿಸಿದ ಭಾರತ ಅಂಡರ್ 19 ಮಹಿಳಾ ತಂಡವು ಬಾಂಗ್ಲಾದೇಶ ವಿರುದ್ಧ 41 ರನ್ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಅಂಡರ್ 19 ಏಷ್ಯಾ ಕಪ್ ಟ್ರೋಫಿ ಗೆದ್ದು ಸಂಭ್ರಮಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಿಕ್ಕಿ ಪ್ರಸಾದ್ ಸಾರಥ್ಯದ ಭಾರತ ತಂಡಕ್ಕೆ ಬಾಂಗ್ಲಾ ಯುವ ಬೌಲರ್ ಗಳು ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿತು.
25 ರನ್ ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಶಾ (52 ರನ್) ಹಾಗೂ ನಾಯಕಿ ನಿಕ್ಕಿ ಪ್ರಸಾದ್ (12 ರನ್) 3ನೇ ವಿಕೆಟ್ ಗೆ 41 ರನ್ ಗಳ ಜೊತೆಯಾಟ ನೀಡಿದರೂ, ಫಾರ್ಜನಾ ಎಸಿನ್ (31ಕ್ಕೆ 4) ಅವರ ಬೌಲಿಂಗ್ ದಾಳಿಗೆ ನಲುಗಿ 20 ಓವರ್ಗಳಿಗೆ 171/7 ಮೊತ್ತ ಗಳಿಸಿತು.
ಈ ಅಲ್ಪ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ಪರ ಫಾಹೊಮಿಡಾ ಚೋಯಾ (18 ರನ್) ಹಾಗೂ ಜುರಿಯಾ ಫೆರೋಡಿಸ್ (22ರನ್) ಬಿಟ್ಟರೆ ಉಳಿದ ಯಾವುದೇ ಆಟಗಾರ್ತಿಯರು ಎರಡಂಕಿ ದಾಟದೆ ಭಾರತದ ಬೌಲರ್ ಗಳ ಬಲೆಯಲ್ಲಿ ಸೆರೆಯಾಗಿ 18.3 ಓವರ್ ಗಳಲ್ಲಿ 76 ರನ್ ಗಳಿಗೆ ಸರ್ವಪತನ ಕಂಡು 41 ರನ್ ಮುಖಭಂಗ ಅನುಭವಿಸಿತು.
ಭಾರತ ಪರ ಆಯುಷಿ ಶುಕ್ಲಾ (17ಕ್ಕೆ 3) ಯಶಸ್ವಿ ಬೌಲರ್ ಎನಿಸಿದರೆ, ಪೂರ್ಣಿಕಾ ಸಿಸೋಡಿಯಾ (12ಕ್ಕೆ 2), ಸೋನಮ್ ಯಾದವ್ (13ಕ್ಕೆ2) ಹಾಗೂ ವಿಜೆ ಜೋಷಿತಾ ಒಂದು ವಿಕೆಟ್ ಪಡೆದು ಬಾಂಗ್ಲಾ ಆಟಗಾರ್ತಿಯರ ಬ್ಯಾಟಿಂಗ್ ಬಲ ಮುರಿದರು. ಗೊಂಗಾಡಿ ತ್ರಿಷಾ ಪಂದ್ಯಶ್ರೇಷ್ಠರಾದರು.