ನವದೆಹಲಿ,ಮೇ 16- ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಇದೇ ಜೂನ್ 6ರಂದು ಕುವೈತ್ ವಿರುದ್ಧ 2024ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಭಾರತ ರಾಷ್ಟ್ರೀಯ ತಂಡ ಮತ್ತು ಬೆಂಗಳೂರು FC ತಂಡದ ನಾಯಕ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸುನಿಲ್ ಛೆಟ್ರಿ, ನಾನು ಎಂದಿಗೂ ಮರೆಯದ ಮತ್ತು ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದು ನನ್ನ ದೇಶಕ್ಕಾಗಿ ಆಡಿದ ಮೊದಲ ಪಂದ್ಯದ ದಿನ. ಅದು ನಂಬಲಸಾಧ್ಯವಾಗಿತ್ತು. ಅಂದು ಬೆಳಿಗ್ಗೆ ರಾಷ್ಟ್ರೀಯ ತಂಡದ ಕೋಚ್ ಸುಖಿ ಸರ್, ನನ್ನ ಬಳಿಗೆ ಬಂದು ನೀವು ಆಡುತ್ತೀರಿ ಎಂದರು. ಆ ಅನುಭವವನ್ನು ಹೇಳಲಸಾಧ್ಯ. ನಾನು ನನ್ನ ಜೆರ್ಸಿಯನ್ನು ತೆಗೆದುಕೊಂಡೆ. ಅಲ್ಲದೆ ಅದರ ಮೇಲೆ ಸ್ವಲ್ಪ ಸುಗಂಧ ದ್ರವ್ಯವನ್ನು ಸಿಂಪಡಿಸಿದೆ. ಏಕೆ ಎಂಬುದು ನಿಜಕ್ಕೂ ನನಗೆ ತಿಳಿದಿಲ್ಲ.
ಜೂನ್ 6 ರಂದು ಕೊಲ್ಕತ್ತಾದ ಸಾಲ್ಟ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ಇಂಟರ್ನ್ಯಾಷನಲ್ ಫುಟ್ಬಾಲ್ಗೆ ವಿದಾಯ ಹೇಳುವುದಾಗಿ ಛೆಟ್ರಿ ತಿಳಿಸಿದ್ದಾರೆ. 39 ವರ್ಷ ವಯಸ್ಸಿನ ಸುನಿಲ್ , ಭಾರತದ ಪರ ಈವರೆಗೆ 150 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 94 ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 20 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 94 ಗೋಲುಗಳನ್ನು ಬಾರಿಸಿದ್ದಾರೆ. ಮಾರ್ಚ್ನಲ್ಲಿ ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಿದ್ದರು.
ಆದರೆ ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲನನುಭವಿಸಿತ್ತು. ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ಪ್ರಸ್ತುತ ಎ ಗುಂಪಿನಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಅಗ್ರಸ್ಥಾನದಲ್ಲಿರುವ ಕತಾರ್ಗಿಂತ ಹಿಂದಿದೆ. 2005ರಲ್ಲಿ ಭಾರತೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದ ಸುನಿಲ್ ಛೆಟ್ರಿ ಅವರು ಭಾರತದ ಸಾರ್ವಕಾಲಿಕ ಟಾಪ್ ಗೋಲ್ ಸ್ಕೋರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿ ತಮ್ಮ ಕುರುಹು ಬಿಡಲಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಸಕ್ರಿಯ ಫಟ್ಬಾಲ್ ಆಟಗಾರರ ಪೈಕಿ ಟಾಪ್ ಗೋಲ್ ಸ್ಕೋರ್ಗಳ ಪಟ್ಟಿಯಲ್ಲಿ ಸುನಿಲ್ ಛೆಟ್ರಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾವನ್ಮಾತಕ ಪೋಸ್ಟ್ :
ಆ ದಿನ, ನನ್ನ ಚೊಚ್ಚಲ ಪಂದ್ಯದಲ್ಲಿ ನನ್ನ ಮೊದಲ ಗೋಲು ಬಹುಶಃ ನಾನು ಎಂದಿಗೂ ಮರೆಯುವುದಿಲ್ಲ. ಅಲ್ಲದೆ ನನ್ನ ರಾಷ್ಟ್ರೀಯ ತಂಡದ ಪ್ರಯಾಣದ ಅತ್ಯುತ್ತಮ ದಿನಗಳನ್ನು ಸಹ ಮರೆಯಲಾರೆ ಎಂದು ಸುನಿಲ್ ಛೆಟ್ರಿ ಹೇಳಿದ್ದಾರೆ.
ಕಳೆದ 19 ವರ್ಷಗಳಲ್ಲಿ ನಾನು ನೆನಪಿಸಿಕೊಳ್ಳುವ ಭಾವನೆಯು ಕರ್ತವ್ಯದ ಒತ್ತಡ ಮತ್ತು ಅಪಾರ ಸಂತೋಷದ ನಡುವಿನ ಉತ್ತಮ ಸಂಯೋಜನೆಯಾಗಿದೆ. ನಾನು ವೈಯಕ್ತಿಕವಾಗಿ ಎಂದಿಗೂ ಯೋಚಿಸಲಿಲ್ಲ. ನಾನು ದೇಶಕ್ಕಾಗಿ ಹಲವು ಪಂದ್ಯಗಳನ್ನಾಡಿದ್ದೇನೆ. ಕೆಲವೊಮ್ಮೆ ಉತ್ತಮ ಅಥವಾ ಕೆಟ್ಟ ಫಲಿತಾಂಶ ನೋಡಿದ್ದೇನೆ. ಇದಾಗ್ಯೂ ಕಳೆದ ಒಂದೂವರೆ, ಎರಡು ತಿಂಗಳು ನನಗೆ ತುಂಬಾ ವಿಚಿತ್ರವಾಗಿತ್ತು.
ಹೀಗಾಗಿಯೇ ನಾನು ಇದುವೇ ನನ್ನ ಕೊನೆಯ ಆಟ ಎಂದು ಭಾವಿಸಲು ಪ್ರಾರಂಭಿಸಿದೆ. ಇದು ತುಂಬಾ ವಿಚಿತ್ರವಾಗಿತ್ತು. ಈ ತರಬೇತುದಾರ, ಆ ತರಬೇತುದಾರ, ಆ ತಂಡ, ಆ ಸದಸ್ಯ, ಆ ಮೈದಾನ, ಆ ವಿದೇಶಿ ಪಂದ್ಯ, ಈ ಉತ್ತಮ ಆಟ, ಆ ಕೆಟ್ಟ ಆಟ, ನನ್ನ ವೈಯಕ್ತಿಕ ಪ್ರದರ್ಶನಗಳು, ಎಲ್ಲವೂ ಕಣ್ಮುಂದೆ ಬಂದವು. ಎಲ್ಲವನ್ನೂ ಯೋಚಿಸಲು ಪ್ರಾರಂಭಿಸಿದೆ. ಹೀಗಾಗಿ ನಿವೃತ್ತಿಗೆ ಇದುವೇ ಸಕಾಲ ಎಂದು ಭಾವಿಸಿದೆ.
ಈ ಬಗ್ಗೆ ತಂದೆ-ತಾಯಿಗೆ, ಹೆಂಡತಿ ಮತ್ತು ಕುಟುಂಬದವರಿಗೆ ತಿಳಿಸಿದೆ. ಇದನ್ನು ಕೇಳಿ ತಾಯಿ ಮತ್ತು ನನ್ನ ಹೆಂಡತಿ ಅಳಲು ಪ್ರಾರಂಭಿಸಿದರು. ಅಂತಿಮವಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಈ ನಿರ್ಧಾರದಿಂದ ದುಃಖಿತನಾಗಿದ್ದೀರಾ? ಎಂದು ಕೇಳಿದರೆ ಖಂಡಿತವಾಗಿಯೂ ಬೇಸರವಿದೆ. ಏಕೆಂದರೆ 19 ವರ್ಷಗಳ ಆಟ, ಎಲ್ಲವೂ ಮುಗಿಯಲಿದೆ.
ಆದರೆ ಅದಕ್ಕೂ ಮುನ್ನ ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡಬೇಕಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ನಮಗೆ ಮೂರು ಅಂಕಗಳ ಅಗತ್ಯವಿದೆ. ಇದು ನಮಗೆ ಬಹಳ ಮುಖ್ಯವಾಗಿದೆ. ಕುವೈತ್ ವಿರುದ್ಧದ ಪಂದ್ಯದ ಈ ಪಂದ್ಯದೊಂದಿಗೆ ವಿದಾಯ ಹೇಳುತ್ತಿದ್ದೇನೆ.
ನಿಜ ಹೇಳಬೇಕೆಂದರೆ, ನನ್ನ ದೇಶದಲ್ಲಿ ನನಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯ, ಅಭಿಮಾನಗಳನ್ನು ಅಭಿಮಾನಿಗಳಿಂದ ಪಡೆದ ಯಾವ ಆಟಗಾರನೂ ಇಲ್ಲ ಎಂಬುದೇ ನನ್ನ ಭಾವನೆ. ಅಷ್ಟೊಂದು ಪ್ರೀತಿ ಕೊಟ್ಟಿದ್ದಾರೆ. ಆದರೆ ಎಲ್ಲದಕ್ಕೂ ಅಂತ್ಯವಿದೆ. ಅದರಂತೆ ಇದೀಗ ನಾನು ಸಹ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳುತ್ತಿರುವುದಾಗಿ ಸುನಿಲ್ ಛೆಟ್ರಿ ತಿಳಿಸಿದ್ದಾರೆ.