ಇಂದೋರ್,ಆ.20- ಕೋಲ್ಕತ್ತಾದ ಆರ್‍ಜಿ ಕರ್ ವೈದ್ಯಕೀಯ ಕಾಲೇಜಿನ ತರಬೇತಿ ನಿರತ ವೈದ್ಯೆ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ದೇಶಾದ್ಯಂತ ಅಂತಹ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂದೋರ್‍ನಲ್ಲಿ ಎಂಜಿಎಂ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯೆ ಮೇಲೆ ಚಲಿಸುತ್ತಿರುವ ಬಸ್‍ನಲ್ಲಿ ಹಲ್ಲೇ ನಡೆಸಲಾಗಿದೆ.
ಈ ಕುರಿತು ಜ್ಯೂನಿಯರ್ ವೈದ್ಯರ ಸಂಘದ ಉಪಾಧ್ಯಕ್ಷೆ ಡಾ. ದೀಪ್ತಿ ವರ್ಮಾ ಅವರು ಗ್ವಾಲಿಯರ್‍ನ ಝಾನ್ಸಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುನಾ ಹಾಗೂ ಬಿಯೋರಾ ಪ್ರದೇಶದ ನಡುವೆ ಸಣ್ಣ ವಾಗ್ವಾದ ನಡೆದಿತ್ತು, ಪ್ರಯಾಣದ ಸಮಯದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ದೈಹಿಕವಾಗಿ ಹಲ್ಲೇ ನಡೆಸಿದ್ದಾರೆ ಎಂದು ವರ್ಮಾ ಆರೋಪಿಸಿದ್ದಾರೆ, ಹಲ್ಲೇ ಪರಿಣಾಮ ವರ್ಮಾ ಅವರ ಉಂಗುರದ ಬೆರಳಿನಲ್ಲಿ ಮುರಿತ ಉಂಟಾಗಿದೆ.
ಅಪರಿಚಿತ ಮಹಿಳೆ ಘಟನಾ ಸ್ಥಳದಿಂದ ಪತಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ, ಆತನ ಜತೆಗೆ ತೆರಳುವ ಮೊದಲು ವೈದ್ಯೆಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪೊಲೀಸರು ಡಾ. ವರ್ಮಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಏತನ್ಮಧ್ಯೆ ಡಾ. ವರ್ಮಾ ಅವರು ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಹಿನ್ನೆಲೆಯ ವಿರುದ್ಧ ಆಂದೋಲನದ ವೈದ್ಯರ ಪ್ರತಿಭಟನೆಯ ನಂತರ ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಆರ್‍ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಮತ್ತು ಉಪ ಪ್ರಾಂಶುಪಾಲ ಸಂಜಯ್ ಬಶಿಷ್ಠ ಅವರನ್ನು ಹುದ್ದೆಯಿಂದ ತೆಗೆದುಹಾಕಿದೆ.