Saturday, July 20, 2024
Homeರಾಷ್ಟ್ರೀಯದರ್ಶನ್‌ ರಕ್ಷಣೆಗೆ ಪ್ರಭಾವಿ ರಾಜಕಾರಣಿಗಳ ಹರಸಾಹಸ

ದರ್ಶನ್‌ ರಕ್ಷಣೆಗೆ ಪ್ರಭಾವಿ ರಾಜಕಾರಣಿಗಳ ಹರಸಾಹಸ

ಬೆಂಗಳೂರು, ಜೂ.13-ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ನನ್ನು ರಕ್ಷಿಸಲು ಆಡಳಿತ ಪಕ್ಷದ ಕೆಲ ಸಚಿವರು, ಶಾಸಕರು ಹಾಗೂ ವಿರೋಧ ಪಕ್ಷದ ಕೆಲವು ಶಾಸಕರು, ಮಾಜಿ ಸಂಸದರು ಶತ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿದೆ.

ಕೆಲವು ಸಚಿವರು ಹಾಗೂ ಶಾಸಕರಗಳು ತನಿಖಾಧಿಕಾರಿಗಳು ಹಾಗೂ ವೈದ್ಯರ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂದು ಕೇಳಿಬಂದಿದೆ. ತನಿಖಾಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದು, ಈ ಪ್ರಕರಣದಲ್ಲಿ ನಟ ದರ್ಶನ್‌ನನ್ನು ರಕ್ಷಿಸುವಂತೆ ಪ್ರಭಾವ ಬೀರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳ ಮೇಲೂ ಸಹ ಪ್ರಭಾವಿಗಳು ಒತ್ತಡ ಹಾಕಿದ್ದಾರೆ ಎಂಬುದು ತಿಳಿದುಬಂದಿದೆ.ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೂ ಸಹ ದರ್ಶನ್‌ನನ್ನು ರಕ್ಷಿಸಲು ಮನವಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ನಡುವೆ ಕೆಲವು ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ನನ್ನು ರಕ್ಷಿಸುವಂತೆ ರಾಜಕಾರಣಿಗಳ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ತನಿಖಾಧಿಕಾರಿಗಳಿಂದ ಸಾಕ್ಷ್ಯ ಸಂಗ್ರಹ
ಬೆಂಗಳೂರು, ಜೂ.13- ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ನಿನ್ನೆ ಕೃತ್ಯ ನಡೆದ ಪಟ್ಟಣಗೆರೆಯ ಶೆಡ್‌ ಹಾಗೂ ಮೃತದೇಹ ಬಿಸಾಡಿದಂತಹ ಸುಮನಹಳ್ಳಿ ಮೋರಿಯ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದ್ದು, ಅಲ್ಲಿ ದೊರೆತ ಕೆಲವು ಸಾಕ್ಷ್ಯಗಳನ್ನು ಪಡೆದುಕೊಂಡಿದ್ದಾರೆ.

ಮಹಜರು ವೇಳೆ ಕೊಲೆಗೆ ಬಳಸಿದಂತಹ ರಾಡ್‌, ಹಗ್ಗ, ಬೆಲ್ಟ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಬಳಿಕ ಮೃತದೇಹ ಸಾಗಿಸಲು ಬಳಸಿದ ವಾಹನ, ಆರೋಪಿಗಳು ಓಡಾಡಿರುವಂತಹ ವಾಹನ ಸೇರಿ ಮೂರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿ ಅದರಲ್ಲಿ ಕಂಡುಬಂದ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸರು ಬಹಳ ಜಾಗ್ರತೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದಾರೆ. ಹಾಗಾಗಿ ದೂರು ನೀಡಿದ ಸೆಕ್ಯುರಿಟಿಗಾರ್ಡ್‌ ಹಾಗೂ ಪಟ್ಟಣಗೆರೆ ಶೆಡ್‌ನ ಕಾವಲುಗಾರನನ್ನು ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿಯನ್ನು ಯಾವಾಗ, ಎಷ್ಟು ಗಂಟೆಗೆ ಕರೆತರಲಾಯಿತು, ಈ ಶೆಡ್‌ ಬಳಿ ಯಾರ್ಯಾರು ಬಂದು ಹೋಗಿದ್ದರು, ಎಷ್ಟು ಗಂಟೆಗೆ ಬಂದಿದ್ದರು ಎಂಬಿತ್ಯಾದಿ ವಿವರಗಳನ್ನು ಶೆಡ್‌ನ ಕಾವಲುಗಾರನಿಂದ ಸಂಗ್ರಹಿಸಲಾಗಿದೆ.
ಇನ್ನು ಮೃತದೇಹ ಪತ್ತೆಯಾದ ಸ್ಥಳದ ಎದುರಿನ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್‌ (ದೂರುದಾರ)ನಿಂದಲೂ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

RELATED ARTICLES

Latest News