ಹಾವೇರಿ,ಮೇ.3- ವಂಟಮೂರಿ ಘಟನೆ ಮಾಸುವ ಮುನ್ನವೇ ಮಹಿಳೆಯೊಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರೀತಿಸಿದ ಯುವತಿಯನ್ನು ಯುವಕ ಕರೆದುಕೊಂಡ ಹೋದನೆಂಬ ಕಾರಣಕ್ಕೆ ಸಿಟ್ಟಿಗೆದ್ದು ಯುವತಿ ಕಡೆಯವರು ಯುವಕನ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ್ದಾರೆ ಎನ್ನಲಾಗಿದೆ.ಹನುಮವ್ವ ಮೆಡ್ಲೇರಿ (50) ಹಲ್ಲೆಗೊಳಗಾದ ಮಹಿಳೆ.ಆರೋಪಿಗಳನ್ನು ಚಂದ್ರಪ್ಪ, ಗಂಗಪ್ಪ ಹಾಗೂ ಗುತ್ಯವ್ವ ಎಂದು ಗುರುತಿಸಲಾಗಿದೆ.
ಹನುಮವ್ವಳ ಮಗ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರಲ್ಲದೆ, ಮಗ ಮಾಡಿದ ತಪ್ಪಿಗೆ ತಾಯಿಯನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿ ಕ್ರೌರ್ಯ ಮೆರೆದಿದ್ದಾರೆ. ಈ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಂಟಮೂರಿಯಲ್ಲಿ ಇದೇ ರೀತಿ ಘಟನೆ ನಡೆದು ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಯುವತಿಯೊಂದಿಗೆ ಓಡಿಹೋದ ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ಯುವತಿಯ ಮನೆಯವರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅರೆಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಆಡಳಿತ, ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ವಂಟಮೂರಿಗೆ ಬಂದು ಮಹಿಳೆಗೆ ಸಾಂತ್ವಾನ ಹೇಳಿದ್ದರು. ನ್ಯಾಯಾಲಯವೂ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆಡಳಿತ ಪ್ರಭುತ್ವಕ್ಕೆ ಚಾಟಿ ಬೀಸಿತ್ತು.