ಬೆಂಗಳೂರು,ಸೆ.6- ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ನಗರದಲ್ಲಿ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆ ಯದಂತೆ ಕಟ್ಟೆಚ್ಚರ ವಹಿಸಬೇಕೆಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.
ನಗರದ ಸಿಎಆರ್ ನಾರ್ತ್ ಕವಾಯತು ಮೈದಾನದಲ್ಲಿ ಇಂದು ಆಯೋಜಿಸಿದ್ದ ಮಾಸಿಕ ಕವಾಯಿತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸರು ಕರ್ತವ್ಯಪ್ರಜ್ಞೆ ಹಾಗೂ ಸಮಯ ಪ್ರಜ್ಞೆಯಿಂದ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕೆಂದರು.
ಗಣೇಶಮೂರ್ತಿಗಳ ವಿಸರ್ಜನೆ ಸುಮಾರು 15 ದಿನಗಳ ಕಾಲ ನಡೆಯಲಿದೆ. ತಮ ತಮ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡು, ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಿ ಶಾಂತಿಯುತ ಹಾಗೂ ಸುಸೂತ್ರವಾಗಿ ಹಬ್ಬ ಆಚರಿಸುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಈ ಹಬ್ಬಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಅದರಂತೆ ಗಣೇಶ ಪ್ರತಿಷ್ಠಾಪನೆ ವೇಳೆ ನಿಯಮಗಳನ್ನು ಪಾಲಿಸಬೇಕು, ಜೊತೆಗೆ ಪೊಲೀಸ್ ಸಿಬ್ಬಂದಿಗಳಲ್ಲೂ ಸೂಚಿಸಿರುವ ಸಲಹೆಸೂಚನೆಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದರು.
ಗಣೇಶ ವಿಸರ್ಜನೆ ವೇಳೆ ಪೊಲೀಸರ ನಿಗಾ ಅವಶ್ಯಕ. ಮೆರವಣಿಗೆ, ವಿಸರ್ಜನೆವರೆಗೂ ಸಮಯೋಚಿತವಾಗಿ ಕೆಲಸ ನಿರ್ವಹಿಸಬೇಕು, ಬಹುತಕ ಗಣೇಶಮೂರ್ತಿಗಳನ್ನು ರಾತ್ರಿ ವೇಳೆ ವಿಸರ್ಜನೆ ಮಾಡಲಾಗುತ್ತದೆ. ಹಾಗಾಗಿ ಪೊಲೀಸರು ತಮ ಸುರಕ್ಷತೆಗಾಗಿ ಜಾಕೆಟ್ಗಳನ್ನು ಬಳಸಬೇಕು, ಸಾರ್ವಜನಿಕರಿಗೆ ಕಾಣುವಂತೆ ಇರಬೇಕು ಎಂದರು.
ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶಮೂರ್ತಿ ಮೆರವಣಿಗೆ ವೇಳೆ ಪೊಲೀಸರು ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು, ಆ ಮಾರ್ಗಗಳಲ್ಲಿರುವ ಬ್ಯಾನರ್, ಬಂಟಿಂಗ್‌್ಸಗಳು ತೊಂದರೆಯಾಗದಂತೆ ತೆರವು ಮಾಡಬೇಕು ಎಂದರು.
ಈ ತಿಂಗಳಲ್ಲಿ ಈದ ಮಿಲಾದ್ ಹಬ್ಬ ಬರುತ್ತದೆ. ಮುಂದಿನ ತಿಂಗಳು ದಸರಾ ದೀಪಾವಳಿ ಹೀಗೆ ಸಾಲುಸಾಲು ಹಬ್ಬಗಳು ಬರುವುದರಿಂದ ಪೊಲೀಸರು ಸೂಕ್ತವಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಅವರು ಸೂಚಿಸಿದರು.