ಬೆಂಗಳೂರು,ಅ.17- ಒಂಬತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ವಿಶೇಷವಾಗಿ ಹೊರ ರಾಜ್ಯದಿಂದ ಬರುವ ವಾಹನಗಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಇತರೆ ರಾಜ್ಯಗಳಿಂದ ಮೈಸೂರು ಮತ್ತು ಕೃಷ್ಣರಾಜ ಸಾಗರಕ್ಕೆ (ಕೆಆರೆಸ್) ತೆರಳುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಬೆಂಬಲ ನೀಡಲು ಈ ಆದೇಶ ನೀಡಲಾಗಿದೆ.
ಇತರೆ ರಾಜ್ಯಗಳಲ್ಲಿ ನೋಂದಣಿಯಾಗಿರುವ ಪ್ರವಾಸಿ ವಾಹನಗಳು ಮತ್ತು ಆ ರಾಜ್ಯಗಳಲ್ಲಿ ರಸ್ತೆ ತೆರಿಗೆ ಪಾವತಿಸುವ ವಾಹನಗಳಿಗೆ ಅಕ್ಟೋಬರ್ 16 ಮತ್ತು 24ರ ನಡುವೆ ಕರ್ನಾಟಕದಲ್ಲಿ ಪ್ರವೇಶ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಬೆಲ್ಜಿಯಂನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಇಬ್ಬರು ಬಲಿ
ದಸರಾ ಮಹೋತ್ಸವದ ಒಂಬತ್ತು ದಿನಗಳ ಅವಧಿಯಲ್ಲಿ ಮೈಸೂರು ನಗರ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‍ಎಸ್ ಅಣೆಕಟ್ಟೆಗೆ ತೆರಳುವ ವಾಹನಗಳು ಮಾತ್ರ ಶುಲ್ಕ ವಿನಾಯಿತಿ ಪಡೆಯಲು ಅರ್ಹವಾಗಿರುತ್ತವೆ. ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಲು ಅವರು ವಿಶೇಷ ಪರವಾನಗಿ ಪಡೆಯಬೇಕಾಗುತ್ತದೆ ಎಂದು ಇಲಾಖೆ ಹೇಳಿದೆ. ಕೇರಳ ಮತ್ತು ತಮಿಳುನಾಡಿನಿಂದ ಮ್ಯಾಕ್ಸಿ ಕ್ಯಾಬ್‍ಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ಬಸ್‍ಗಳು ತೆರಿಗೆ ವಿನಾಯಿತಿಯಿಂದ ಹೆಚ್ಚಿನ ಪ್ರಯೋಜನ ಪಡೆಯಲಿವೆ.
ದಸರಾ ಸಂದರ್ಭದಲ್ಲಿ ಪ್ರತಿದಿನ 2,000 ಟ್ಯಾಕ್ಸಿಗಳು, 1,000 ಮ್ಯಾಕ್ಸಿ ಕ್ಯಾಬ್‍ಗಳು ಮತ್ತು 300 ಪ್ರವಾಸಿ ಬಸ್‍ಗಳು ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುತ್ತವೆ. ಪ್ರವೇಶ ಶುಲ್ಕ ಟ್ಯಾಕ್ಸಿಗಳಿಗೆ 300 ರೂ. ಮ್ಯಾಕ್ಸಿ ಕ್ಯಾಬ್‍ಗಳಿಗೆ 1,800-2,000 ರೂ. ಮತ್ತು ಬಸ್‍ಗಳಿಗೆ ಅವುಗಳ ಆಸನ ಸಾಮಥ್ರ್ಯದ ಆಧಾರದ ಮೇಲೆ 15,000 ರೂ.ವರೆಗೆ ಇರುತ್ತದೆ. ಪ್ರತಿ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ ಅದು ಏಳು ದಿನಗಳವರೆಗೆ ಮಾನ್ಯವಾಗಿರುತ್ತದೆ.
ಸ್ಥಳೀಯ ಆರ್ಥಿಕತೆ ಸುಧಾರಣೆ ತೆರಿಗೆ ವಿನಾಯಿತಿ ಇರುವುದರಿಂದ ದಸರಾ ಸಮಯದಲ್ಲಿ ಮೈಸೂರು ಮತ್ತು ಕೆಆರ್‍ಎಸ್‍ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಹೋಟೆಲ್ ಉದ್ಯಮದ ಜೊತೆ ಸ್ಥಳೀಯ ಆರ್ಥಿಕತೆ ಸುಧಾರಣೆಗೆ ಇದು ಅನುಕೂಲವಾಗಲಿದೆ. ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ವಿಶೇಷವಾಗಿರುವುದರಿಂದ ಇಲ್ಲಿಗೂ ಕೂಡ ತೆರಿಗೆ ವಿನಾಯಿತಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ರಾಹುಲ್ ಪ್ರಧಾನಿ : ತರೂರ್
32 ಒಕ್ಕೂಟಗಳನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಿಂದ ನಷ್ಟವಾಗಿರುವುದರಿಂದ ಸರ್ಕಾರ ಈ ವರ್ಷ ತೆರಿಗೆ ವಿನಾಯಿತಿಯನ್ನು ಘೋಷಿಸುವುದಿಲ್ಲ ಎಂದು ಆತಂಕದಲ್ಲಿತ್ತು.