Homeಅಂತಾರಾಷ್ಟ್ರೀಯಫ್ರಾನ್ಸ್‌ನಲ್ಲಿ ಅಶಾಂತಿ, ಕರ್ಫ್ಯೂ : ಎಚ್ಚರಿಕೆಯಿಂದಿರುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಫ್ರಾನ್ಸ್‌ನಲ್ಲಿ ಅಶಾಂತಿ, ಕರ್ಫ್ಯೂ : ಎಚ್ಚರಿಕೆಯಿಂದಿರುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಲಂಡನ್, ಅ. 22- ಫ್ರಾನ್ಸ್‌ನ ವಿವಿಧ ಭಾಗಗಳಲ್ಲಿ ಮುಂದುವರಿದಿರುವ ಪ್ರತಿಭಟನೆಗಳು, ಹಿಂಸಾತ್ಮಕ ಘರ್ಷಣೆಗಳು ಹಾಗೂ ಸ್ಥಳೀಯ ಕರ್ಫ್ಯೂ ಹಿನ್ನೆಲೆಯಲ್ಲಿ, ಅಲ್ಲಿ ವಾಸಿಸುತ್ತಿರುವ ಮತ್ತು ಅಲ್ಲಿಗೆ ಪ್ರಯಾಣಿಸುವ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಭಾರತ ಸರ್ಕಾರ ಸೂಚಿಸಿದೆ.

ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿರುವ ಸಲಹೆಯಲ್ಲಿ, ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ದೊಡ್ಡ ಗುಂಪುಗಳು ಮತ್ತು ಜನಸಂದಣಿ ಇರುವ ಸ್ಥಳಗಳಿಗೆ ಹೋಗದಂತೆ ಭಾರತೀಯರಿಗೆ ಸೂಚಿಸಿದೆ. ಅಲ್ಲದೆ, ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ.

ಫ್ರಾನ್ಸ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಭಾರತೀಯರು ಎಚ್ಚರಿಕೆಯಿಂದಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.

ಸ್ಥಳೀಯ ಸುದ್ದಿಗಳು ಹಾಗೂ ಫ್ರಾನ್ಸ್ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿನ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸುವಂತೆ ಭಾರತೀಯರಿಗೆ ಸಲಹೆ ನೀಡಲಾಗಿದೆ. ಪ್ಯಾರಿಸ್ ಪ್ರದೇಶದ ಸಾರ್ವಜನಿಕ ಸಾರಿಗೆ ಸೇವೆಗಳ ಕುರಿತು ಮಾಹಿತಿಗಾಗಿ ಸಂಬಂಧಿತ ವೆಬ್‌ಸೈಟ್ ಪರಿಶೀಲಿಸುವಂತೆಯೂ ಸೂಚಿಸಲಾಗಿದೆ.

ತುರ್ತು ಪರಿಸ್ಥಿತಿಯಲ್ಲಿ ಪ್ಯಾರಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ಮಾರ್ಸೆಲ್ಲೆಯಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ವಾರಾಂತ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2,400ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಸುಮಾರು 1,000 ಪೊಲೀಸ್ ಅಧಿಕಾರಿಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇಂತಹ ಹಿಂಸಾಚಾರ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭರವಸೆ ನೀಡಿದ್ದಾರೆ.

RELATED ARTICLES
spot_img

Latest News