ವಾಷಿಂಗ್ಟನ್,ಏ.12- ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಅಧ್ಯಕ್ಷ ಡೊನಾ;ಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಮತ್ತೆ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದಾರೆ. ಮಾತುಕತೆ ವಿಫಲವಾದರೆ ಯುದ್ಧವೇ ಪರ್ಯಾಯ ಎಂದು ಮೊದಲೇ ಟ್ರಂಪ್ ಹೇಳಿದ್ದರು. ಹಾರ್ಮುಜ್ ಜಲಸಂಧಿಯನ್ನು ಅಮೆರಿಕವೇ ಮುಕ್ತಗೊಳಿಸುತ್ತದೆ ಎಂದು ಹೇಳಿದ್ದಾರೆ. ಒಪ್ಪಂದ ಮಾಡಿಕೊಳ್ಳದಿರುವ ಇರಾನ್‌ನ ನಿಲುವನ್ನು ದುರಾದೃಷ್ಟಕರ ಎಂದು ಕರೆದಿರುವ ಟ್ರಂಪ್ ಮತ್ತೆ ದಾಳಿಯ ಸುಳಿವು ನೀಡಿದ್ದಾರೆ.
ಇಸ್ಲಾಮಾಬಾದ್ ಮಾತುಕತೆ ವಿಫಲವಾದ 24 ಗಂಟೆಗಳೊಳಗೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇದನ್ನು ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಸನ್ನದ್ಧತೆ ಎಂದೇ ಅರ್ಥೈಸಲಾಗುತ್ತಿದೆ. ಪೆಂಟಗನ್ ಈಗಾಗಲೇ ಆ ಪ್ರದೇಶದಲ್ಲಿ ಹೆಚ್ಚುವರಿ ನೌಕಾ ಮತ್ತು ವಾಯುಪಡೆಯನ್ನು ನಿಯೋಜಿಸಿದೆ ಎಂಬ ವರದಿಗಳಿವೆ. ಅಲ್ಲದೆ, ಇಸ್ರೇಲ್ ಕೂಡ ಇರಾನ್ ವಿರುದ್ಧ ಸ್ವತಂತ್ರ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿರುವ ಸೂಚನೆಗಳಿವೆ.
ಮಾತುಕತೆಗಳು ಯಾವುದೇ ಫಲಿತಾಂಶಗಳನ್ನು ನೀಡದ ನಂತರ ಅಧ್ಯಕ್ಷರು ಟೆಹ್ರಾನ್ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಬೆಳಕು ಚೆಲ್ಲುವ ಜಸ್ಟ್ ದಿ ನ್ಯೂಸ್ ವೆಬ್‌ಸೈಟ್‌ನಿಂದ ಬಂದ ಲೇಖನವನ್ನು ಟ್ರಂಪ್ ಟ್ರುತ್ ಸೋಶಿಯಲ್‌ಗೆ ಮರು ಪೋಸ್ಟ್ ಮಾಡಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಟ್ರಂಪ್ ಹೇಳಿಕೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಏರಿಕೆಯಾಗಿವೆ. ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟ ತಕ್ಷಣ ಶಾಂತಿ ಮಾತುಕತೆಗೆ ಕರೆ ನೀಡಿವೆ. ಆದರೆ ಟ್ರಂಪ್ ಸದ್ಯಕ್ಕೆ ಯಾವುದೇ ಮತ್ತೊಂದು ಸಂಧಾನದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಇರಾನ್ ನಮ ಷರತ್ತುಗಳನ್ನು ಒಪ್ಪುವವರೆಗೆ ಯಾವುದೇ ಮಾತುಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ, ಅಲ್ಲಿನ ವರಿಷ್ಠ ನಾಯಕ ಅಯಾತೊಲ್ಲಾ ಖಮೇನಿ ಅವರು ಯಾವುದೇ ಬೆದರಿಕೆಗೆ ಸಮರ್ಪಕವಾಗಿ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ.
ಇಸ್ಲಾಮಾಬಾದ್ ಮಾತುಕತೆಗೆ ಮುನ್ನವೇ ಟ್ರಂಪ್ ಅವರು, ಇರಾನ್ ಪರಮಾಣು ಒಪ್ಪಂದಕ್ಕೆ ಬರದಿದ್ದರೆ ಮಿಲಿಟರಿ ಕಾರ್ಯಾಚರಣೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದರು. ಈಗ ಮಾತುಕತೆ ವಿಫಲಗೊಂಡ ಹಿನ್ನೆಲೆ ತಮ ನಿಲುವನ್ನು ಮತ್ತೊಮೆ ಸ್ಪಷ್ಟಪಡಿಸಿದ್ದಾರೆ. ನಾನು ಮೊದಲೇ ಹೇಳಿದ್ದೆ, ಸಂಧಾನ ವಿಫಲವಾದರೆ ಯುದ್ಧ. ಅದೇ ಈಗ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.
ತಮ ಹೇಳಿಕೆಯಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿ ಪ್ರಸ್ತಾಪಿಸಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ನಾವೇ ಮುಕ್ತ ಮಾಡುತ್ತೇವೆ ಎಂದು ಹೇಳಿದ್ದಾರೆ. ಜಾಗತಿಕ ತೈಲ ಸಾಗಣೆ ನಡೆಯುವ ಈ ಜಲಮಾರ್ಗದ ಮೇಲೆ ಇರಾನ್ ಪ್ರಭಾವ ಹೊಂದಿದೆ. ಇತ್ತೀಚೆಗೆ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಹಲವಾರು ತೈಲ ಟ್ಯಾಂಕರ್‌ಗಳನ್ನು ತಡೆದಿದೆ ಎಂಬ ಆರೋಪವಿದೆ. ಈಗ ಅಮೆರಿಕ ತನ್ನ ಸೈನ್ಯದ ಮೂಲಕ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಹೇಳಿರುವುದು ಯುದ್ಧದ ಮುನ್ಸೂಚನೆಯಾಗಿದೆ.
ಒಪ್ಪಂದ ಮಾಡಿಕೊಳ್ಳದಿರುವುದು ದುರಾದೃಷ್ಟಕರ :
ಅಮೆರಿಕದ ಅತ್ಯುತ್ತಮ ಆಫರ್‌ಗಳನ್ನು ಇರಾನ್ ತಿರಸ್ಕರಿಸಿರುವುದು ದುರಾದೃಷ್ಟಕರ ಎಂದು ಟ್ರಂಪ್ ಬಣ್ಣಿಸಿದ್ದಾರೆ. ನಾವು ಸ್ನೇಹದ ಹಸ್ತವನ್ನು ಚಾಚಿದ್ದೆವು. ಆದರೆ ಅವರು ಕೈಕೊಡಲಿಲ್ಲ. ಅವರ ನಿರ್ಧಾರ ಅತ್ಯಂತ ದುರದೃಷ್ಟಕರ ಎಂದು ಹೇಳಿದರು. ತಮ ಆಡಳಿತದಲ್ಲಿ ಇರಾನ್ ವಿರುದ್ಧ ಗರಿಷ್ಠ ಒತ್ತಡ ನೀತಿಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.
ಇರಾನ್ ಯುದ್ಧದ ಕೇಂದ್ರಬಿಂದುವಾಗಿದ್ದ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿ, ಜಾಗತಿಕ ಇಂಧನ ಪೂರೈಕೆಯನ್ನು ಅಡ್ಡಿಪಡಿಸಿದ ನಂತರ ಯುದ್ಧದ ಕೇಂದ್ರಬಿಂದುವಾಗಿದ್ದ ನಿರ್ಣಾಯಕ ಕಡಲ ದಟ್ಟಣೆಯ ತಾಣವಾದ ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ನೌಕಾಪಡೆ ಹೇಗೆ ನಿಯಂತ್ರಣ ಸಾಧಿಸಬಹುದು.
ಯುದ್ಧ ತೀವ್ರಗೊಂಡರೆ ಸೇನಾ ಗಡಿಗಳನ್ನು ಮೀರಿ ಭಾರಿ ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ. ವಾಷಿಂಗ್ಟನ್ ಇರಾನ್‌ನ ಪರಮಾಣು ನೆಲೆ, ಪೂರ್ವ ಪ್ರದೇಶಗಳ ಮೇಲೆ ದಾಳಿಗೆ ಪಾಕ್ ವಾಯುನೆಲೆಗಳಿಗೆ (ನಿರ್ದಿಷ್ಟವಾಗಿ ಬಲೂಚಿಸ್ತಾನದಲ್ಲಿ) ಪ್ರವೇಶ ಕೇಳಬಹುದು. ಈ ಪ್ರವೇಶವನ್ನು ನೀಡಿದರೆ ಪಾಕಿಸ್ತಾನ ನೇರವಾಗಿ ಇರಾನ್‌ನ ಸೇನಾ ದಾಳಿಗೆ ಗುರಿಯಾಗಬಹುದು.
