Friday, November 22, 2024
Homeರಾಜ್ಯಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಮುಡಾ ಹಗರಣದ ತನಿಖೆ

ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ಮುಡಾ ಹಗರಣದ ತನಿಖೆ

ಬೆಂಗಳೂರು,ಜು.4- ಮುಡಾದಿಂದ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯಸರ್ಕಾರ ಮುಂದಾಗಿದ್ದು, ಈಗಾಗಲೇ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ಹಿಂಪಡೆಯಲಾಗಿದೆ.

ಜಿಲ್ಲಾಧಿಕಾರಿಯವರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಹೆಚ್ಚುವರಿ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲು ಚಿಂತನೆ ನಡೆದಿದೆ.ವಿಶೇಷ ತನಿಖೆ ಅಥವಾ ಸಿಐಡಿ ವಿಚಾರಣೆಗೆ ಸಲಹೆಗಳು ಕೇಳಿಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿ ವರದಿ ಮತ್ತು ಹಿರಿಯ ಐಎಎಸ್ ಅಧಿಕಾರಿಯ ತನಿಖೆಯ ಬಳಿಕ ಪ್ರಕರಣದ ಹೆಚ್ಚುವರಿ ತನಿಖೆಗೆ ಆದೇಶಿಸುವ ಸಾಧ್ಯತೆಗಳಿವೆ.

ನಿವೇಶನ ಹಂಚಿಕೆಗೆ ಸಂಬಂಧಪಟ್ಟಂತೆ ಮುಡಾ ಆಯುಕ್ತರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಎಲ್ಲೆಲ್ಲಿ ಕರ್ತವ್ಯ ಲೋಪಗಳಾಗಿವೆ?, ಕಾನೂನು ಉಲ್ಲಂಘನೆಯ ಅಂಶಗಳೇನು? ಎಂಬೆಲ್ಲಾ ವಿಚಾರಗಳನ್ನು ಪರಿಶೀಲಿಸಲಾಗುತ್ತಿದ್ದು, ಅವ್ಯವಹಾರಗಳು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಹೊಸ ಬೆಳವಣಿಗೆ ಎಂಬಂತೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟ್ರೊನೊಲಾಜಿಯಾ ದಾಖಲಾತಿಗಳು ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿಯವರ ವಿಸ್ತೃತವಾದ ಪತ್ರ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಮೈಸೂರಿನ ದೇವನೂರು ಮೂರನೇ ಹಂತದ ಬಡಾವಣೆಗಾಗಿ ಕೆಸರೆ ಗ್ರಾಮದಲ್ಲಿ ಶ್ರೀನಿಂಗ ಅವರ ಹೆಸರಿನಲ್ಲಿದ್ದ 3.16 ಎಕರೆಯನ್ನು ಭೂಸ್ವಾಧೀನಪಡಿಸಿಕೊಳ್ಳಲು 1992 ರಲ್ಲಿ ಅಧಿಸೂಚನೆ ಹೊರಡಿಸಲಾ ಗಿತ್ತು. 1998 ರಲ್ಲಿ ಅಂತಿಮ ಅಧಿಸೂಚನೆ ಪ್ರಕಟವಾಗಿದ್ದು, 1998 ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

2004 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಎಂಬುವರು ಈ ಭೂಮಿಯನ್ನು ಕ್ರಯಕ್ಕೆ ಪಡೆದಿರುತ್ತಾರೆ. 2005 ರಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿದೆ. 2010 ರಲ್ಲಿ ಮಲ್ಲಿಕಾರ್ಜುನ ಸ್ವಾಮಿಯವರು ತಮ ತಂಗಿ ಪಾರ್ವತಿ ಅವರಿಗೆ ಭೂಮಿಯನ್ನು ದಾನ ಮಾಡಿದ್ದರು. ಅದರಂತೆ ದಾಖಲಾತಿಗಳು ಬದಲಾಗಿವೆ.

2014 ರಲ್ಲಿ ಪಾರ್ವತಿ ಅವರು ಮನವಿ ಸಲ್ಲಿಸಿದ್ದು, ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡುವಂತೆ ವಿನಂತಿಸಿದ್ದಾರೆ. 2017 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಭೂಮಿ ಬಳಕೆ ಮಾಡಿಕೊಂಡಿರುವು ತಪ್ಪಾಗಿದ್ದು, ಪರಿಹಾರ ರೂಪದಲ್ಲಿ ಬದಲಿ ನಿವೇಶನವನ್ನು ಶೇ. 50 ರ ಅನುಪಾತದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿರುತ್ತದೆ. ಈ ಎಲ್ಲಾ ವಿಚಾರಗಳಿಗೂ ದಾಖಲಾತಿಗಳು ಲಭ್ಯವಿದ್ದು, ಅದರ ಪರಿಶೀಲನೆಗಳು ನಡೆಯುತ್ತಿವೆ.

ವಿವಾದ ಕಾವೇರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೆಯಾಗಿದ್ದ ಪರ್ಯಾಯ ನಿವೇಶನಗಳನ್ನು ಹಿಂಪಡೆಯಲು ಆದೇಶಿಸಿದ್ದಾರೆ. ಜೊತೆಯಲ್ಲಿ ಮುಡಾ ಆಯುಕ್ತರನ್ನು ಅಮಾನತುಗೊಳಿಸಿದ್ದಾರೆ.

ಪ್ರಾಧಿಕಾರದಿಂದ ಇದೇ ರೀತಿ ಬೇರೆಬೇರೆ ನಿವೇಶನಗಳ ಹಂಚಿಕೆಯನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ನಡೆಸಲು ಮುಂದಾಗಿದೆ. ತನಿಖೆಯನ್ನು ಸಿಬಿಐಗೆ ವಹಿಸಬೇಕು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯನವರು ರಾಜೀನಾಮೆಯನ್ನೂ ನೀಡುವುದಿಲ್ಲ, ಸಿಬಿಐಗೂ ವಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

RELATED ARTICLES

Latest News