ನೋಯ್ಡಾ ಮೇ 28 – ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ. ಕಳೆದ 25 ರಂದು ಸಂಜೆ ನೋಯ್ಡಾ ಸೆಕ್ಟರ್ -100 ರ ಲೋಟಸ್ ಬೌಲೆವರ್ಡ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ, ಐಆರ್‌ಎಸ್ ಅಧಿಕಾರಿ ಸೌರಭ್ ಮೀನಾ, ಶಿಲ್ಪಾ ಗೌತಮ್ ಎಂಬ ಮಹಿಳೆಯೊಂದಿಗೆ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಮತ್ತು ಅವರು ಒಟ್ಟಿಗೆ ವಾಸಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿತ್ತು. ಶಿಲ್ಪಾ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರೆ, ಸೌರಭ್ ಆದಾಯ ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿದ್ದರು.
ಪೊಲೀಸರು ಶಿಲ್ಪಾ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ದೂರು ದಾಖಲಿಸಿದ್ದರು. ಸೌರಭ್ ತನ್ನನ್ನು ಮದುವೆಯಾಗುವಂತೆ ಶಿಲ್ಪಾ ಒತ್ತಾಯ ಮಾಡಿದ್ದರು ಎಂದು ಪೋಷಕರು ಹೇಳಿದ್ದಾರೆ. ಈ ಕಾರಣದಿಂದಾಗಿ ಅವರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಮತ್ತು ಸೌರಭ್ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದನು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸೌರಭ್‌ನನ್ನು ಬಂಧಿಸಲಾಗಿದೆ. ಘಟನೆಯ ಸಮಯದಲ್ಲಿ ಸೌರಭ್ ಅಪಾರ್ಟ್‌ಮೆಂಟ್‌ನಲ್ಲಿದ್ದರು.
ಮೇ 25ರ ಶನಿವಾರ ಸಂಜೆ ಲೋಟಸ್ ಬೌಲೆವರ್ಡ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಆತಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಮನೀಶ್ ಕುರ್ಮಾ ಮಿಶ್ರಾ ತಿಳಿಸಿದ್ದಾರೆ.
ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತಲುಪಿದೆ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಕುಟುಂಬದ ದೂರಿನ ಆಧಾರದ ಮೇಲೆ ಸೌರಭ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.