Saturday, July 13, 2024
Homeರಾಜಕೀಯರೈತರಿಗೆ ಬರ ಪರಿಹಾರ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ಬೆಂಗಳೂರು, ಮೇ 28– ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆಯಾಗಿದ್ದರೂ ರೈತರ ಖಾತೆಗೆ ಜಮೆ ಮಾಡಲು ವಿಫಲವಾಗಿರುವ ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಈ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಪ್ರತ್ಯೇಕವಾಗಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟಿತ ರೈತರ ಗೋಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಲತೆಯಿಂದ ನೊಂದಿರುವ ರೈತರು ಸದ್ಯ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೈಯಲ್ಲಿ ಕಾಸಿಲ್ಲದೇ ಬಿತ್ತನೆ ಕಾರ್ಯ ಕೈಗೊಳ್ಳಲು ಆಗದ ಪರಿಸ್ಥಿತಿ ಉದ್ಭವಿಸಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಕಷ್ಟದ ಸಮಯದಲ್ಲಾದರೂ ಸರ್ಕಾರ ನಿಗಽಪಡಿಸಿರುವ ಬರ ಪರಿಹಾರವೂ ರೈತನ ಖಾತೆಗೆ ಜಮೆಯಾಗುತ್ತಿಲ್ಲ, ಬೆಳೆ ವಿಮೆ ನಗದೀಕರಣದ ಪರಿಸ್ಥಿತಿಯೂ ಇದೇ ಆಗಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌‍ ಸರ್ಕಾರ ಬಂದು ಒಂದು ವರ್ಷದ ಅವಧಿಯಿಂದಲೂ ರೈತರು ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ, ಕೇವಲ ಮತ ಬ್ಯಾಂಕ್‌ ರಾಜಕಾರಣವನ್ನು ಹೊರತುಪಡಿಸಿ ಈ ಸರ್ಕಾರ ಯಾವುದೇ ಜನಪರ ಕಾರ್ಯಗಳಿಗೂ ಕಿಂಚಿತ್ತು ಗಮನ ಹರಿಸಲಿಲ್ಲ. ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ ಬಂದು ತಾಂತ್ರಿಕ ತೊಡಕಿನ ಹೆಸರಿನಲ್ಲಿ ಹಣ ಕೈ ಸೇರದೇ ಹತಾಶೆಯ ಸ್ಥಿತಿಯಲ್ಲಿರುವ ರೈತನಿಗೆ ನೆರವಾಗಲಿ ಎಂದು ಮನವಿ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನೀಡಿರುವ ನಿರ್ದೇಶನಕ್ಕೂ ಕಿಮತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನೋಡಿದರೆ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲಾಗದ ಅಸಮರ್ಥ ಆಡಳಿತದ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ರವರು, ಉತ್ತಮ ಮಳೆಯಾಗುತ್ತಿರುವ ಈ ಸಂದರ್ಭದಲ್ಲಾದರೂ ರೈತರ ನೆರವಿಗೆ ಕಾಂಗ್ರೆಸ್‌‍ ಸರ್ಕಾರ ಬಾರದಿದ್ದಲ್ಲಿ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮೂರೂ ಇಲ್ಲವೆಂದು ಜನತೆ ತೀರ್ಮಾನಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈತರ ಬರ ಪರಿಹಾರಕ್ಕಾಗಿ 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿ ಒಂದು ತಿಂಗಳ ಕಳೆದರೂ ಅದನ್ನು ರೈತರ ಬ್ಯಾಂಕ್‌ ಖಾತೆಗೆ ಹಾಕದೆ ಸತಾಯಿಸುತ್ತಿದೆ ಈ ರೈತ ವಿರೋಧಿ ಕಾಂಗ್ರೆಸ್‌‍ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಒಟ್ಟಿನಲ್ಲಿ ಈ ದರಿದ್ರ ಕಾಂಗ್ರೆಸ್‌‍ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮದಿಯಿಲ್ಲ ಎಂದು ಅಶೋಕ್‌ ಟೀಕಾಪ್ರಹಾರ ನಡೆಸಿದ್ದಾರೆ.

RELATED ARTICLES

Latest News