Saturday, July 27, 2024
Homeರಾಜ್ಯಸಿಎಂ, ಡಿಸಿಎಂ ವಿರುದ್ಧ ಗೃಹಸಚಿವ ಪರಮೇಶ್ವರ ಅಸಮಾಧಾನ

ಸಿಎಂ, ಡಿಸಿಎಂ ವಿರುದ್ಧ ಗೃಹಸಚಿವ ಪರಮೇಶ್ವರ ಅಸಮಾಧಾನ

ಬೆಂಗಳೂರು, ಮೇ 28- ವಿಧಾನಪರಿಷತ್‌ ಸದಸ್ಯರ ಆಯ್ಕೆ ವಿಚಾರದಲ್ಲಿ ಹಿರಿಯರು ಹಾಗೂ ಅನುಭವಿಗಳ ಜೊತೆ ಸಮಾಲೋಚನೆ ನಡೆಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಅಸಮಾಧಾನ ಹೊರಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು ನಮ್ಮನ್ನೂ ಸೇರಿದಂತೆ ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಬೇಕು. ಪಕ್ಷ ಹಾಗೂ ಸರ್ಕಾರದಲ್ಲಿ ಕೆಲಸ ಮಾಡಿದವರ ಸಂಪರ್ಕದಲ್ಲಿರುವವರ ಬಗ್ಗೆ ಚರ್ಚೆ ಮಾಡಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ.

ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಪಕ್ಷದಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿ ಅನುಭವಿಗಳಾಗಿರುವವರ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಬೇಕು. ಜಿಲ್ಲಾವಾರು, ಜಾತಿವಾರು ಹಾಗೂ ಪಕ್ಷ ಸಂಘಟನೆಯಲ್ಲಿ ಸಹಾಯ ಮಾಡಿದವರು ಯಾವ ಜಾತಿ ಕಾಂಗ್ರೆಸ್‌‍ ಜೊತೆ ದೃಢವಾಗಿ ನಿಂತಿದೆ ಎಂಬುದನ್ನು ನಮೊಂದಿಗೆ ಚರ್ಚೆ ಮಾಡಬೇಕಿದೆ. ಏಕಾಏಕಿ ಇಬ್ಬರೇ ಕುಳಿತು ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.

ಬಿಜೆಪಿಯವರು ಯಾವುದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಲಿ, ಅದು ಅವರ ಹಕ್ಕು. ಅವರ ಟೀಕೆಗಳಿಗೆ ನಾವು ಸರಿಯಾದ ಉತ್ತರ ನೀಡುತ್ತೇವೆ ಎಂದು ಹೇಳಿದರು.ಸರ್ಕಾರದ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಜಿಲ್ಲಾ ಪ್ರವಾಸದಲ್ಲೂ ಜಿಲ್ಲಾ ಕಾಂಗ್ರೆಸ್‌‍ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಮುಖಂಡರ ಜೊತೆ ಚರ್ಚೆ ಮಾಡಬೇಕು ಎಂಬುದು ಹೊಸದಲ್ಲ. ಈ ಹಿಂದೆ ನಾನು ಎಂಟು ವರ್ಷ ಪಕ್ಷದ ಅಧ್ಯಕ್ಷನಾಗಿದ್ದಾಗ ಇದೇ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ಸಚಿವರು ಪಕ್ಷದ ಕಚೇರಿಯತ್ತ ಬರುತ್ತಿರಲಿಲ್ಲ ಎಂಬುದನ್ನು ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಮನಿಸಿದ್ದಾರೆ. ನಿನ್ನೆ ಒಳ್ಳೆಯ ಸೂಚನೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ಪಕ್ಷದ ಹೈಕಮಾಂಡ್‌ ನಾಯಕರು ತೀರ್ಮಾನ ಮಾಡುತ್ತಾರೆ. ಡಿ.ಕೆ.ಶಿವಕುಮಾರ್‌ ಅವರನ್ನು ಬದಲಾಯಿಸಬೇಕು ಎಂದರೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಲ್ಲವಾದರೆ ಮುಂದುವರೆಸುತ್ತಾರೆ. ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಎರಡು ಬಾರಿ ಚರ್ಚೆಗಳು ಬಂದಾಗಲಾದರೂ ಬದಲಾವಣೆ ಮಾಡದೇ ಮುಂದುವರೆಸಲಾಗಿತ್ತು. ಈಗಲೂ ಅದೇ ರೀತಿ ಹೈಕಮಾಂಡ್‌ ನಿರ್ಧರಿಸುತ್ತಿದೆ.

ಈ ವಿಚಾರವನ್ನು ಡಿ.ಕೆ.ಶಿವಕುಮಾರ್‌ ಆಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲೀ ತೀರ್ಮಾನ ಮಾಡುವುದಿಲ್ಲ. ಡಿ.ಕೆ.ಶಿವಕುಮಾರ್‌ರವರು ಉಪಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಾಗಿ ಎರಡೂ ಹುದ್ದೆಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ. ಅದು ಹೊರೆಯಾಗಿದ್ದರೆ ಅದನ್ನು ಅವರು ಹೇಳುತ್ತಾರೆ. ಜವಾಬ್ದಾರಿ ಹೆಚ್ಚಾಗಿದೆ ಎಂದು ಹೈಕಮಾಂಡ್‌ಗೆ ಅನಿಸಿದರೆ ಆಗ ಬದಲಾವಣೆಯಾಗುವ ಸಂಭವವಿದೆ. ಆದರೆ ಯಾವುದೇ ನಿರ್ಧಾರವಾಗಲು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಫೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದ ಮಹಿಳೆ ಕ್ಯಾನ್ಸರ್‌ನಿಂದಾಗಿ ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ನಿಧನರಾಗಿದ್ದಾರೆ ಎಂಬ ಮಾಹಿತಿ ಇದೆ. ಅನಂತರ ಯಾವೆಲ್ಲಾ ಬೆಳವಣಿಗೆಗಳಾಗಿವೆ ಎಂಬುದನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ತಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ನಿಭಾಯಿಸಲು ಸಿದ್ಧ ಎಂದು ಸಚಿವ ಕೆ.ಎನ್‌.ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಪಕ್ಷಕ್ಕಾಗಿ ತ್ಯಾಗ ಮಾಡಲು ಬಹಳಷ್ಟು ಜನ ಇದ್ದಾರೆ. ಈ ಸಂಖ್ಯೆಯೇನು ಕಡಿಮೆಯಿಲ್ಲ. ರಾಜಣ್ಣ ಅವರು ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಹೇಳಿರುವುದು ಸಂತೋಷದ ವಿಚಾರ ಎಂದರು.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕಾನೂನು ಪ್ರಕಾರ ಕ್ರಮಗಳು ಚಾಲ್ತಿಯಲ್ಲಿವೆ. ಈಗಾಗಲೇ ಬ್ಲೂ ಕಾರ್ನರ್‌ ನೋಟೀಸ್‌‍ ಜಾರಿ ಮಾಡಲಾಗಿದೆ. ಎಸ್‌‍ಐಟಿ ಅಧಿಕಾರಿಗಳು ಸಿಆರ್‌ಪಿಸಿ 41 ಎ ನೋಟೀಸ್‌‍ ಜಾರಿ ಮಾಡಲಾಗಿದೆ. ವಿದೇಶದಲ್ಲಿ ಇರುವ ಅವರನ್ನು ಬಂಧಿಸಿ ಕರೆತರುವ ಎಲ್ಲಾ ಪ್ರಕ್ರಿಯೆಗಳು ಚಾಲನೆಯಲ್ಲಿದ್ದು, ವಿಳಂಬವಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಸಂಸದರಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ಸೌಲಭ್ಯವಿದೆ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಕಂಡರೆ ಅದು ತನ್ನಷ್ಟಕ್ಕೆ ತಾನೇ ರದ್ದುಗೊಳ್ಳುತ್ತದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಇದನ್ನೆಲ್ಲಾ ತಿಳಿದುಕೊಂಡು ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಮರಳುವುದಾಗಿ ಹೇಳಿರಬಹುದು. ನಾವು 31 ರವರೆಗೂ ಕಾದು ನೋಡುತ್ತೇವೆ. ಒಂದು ವೇಳೆ ಬರದೇ ಇದ್ದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರಜ್ವಲ್‌ ರೇವಣ್ಣ ಅವರಿಗೆ ಶರಣಾಗುವ ಅವಕಾಶ ನೀಡುವುದುಅಥವಾ ಬಂಧಿಸುವ ಬಗ್ಗೆ ಎಸ್‌‍ಐಟಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ ಹೇಳಿದರು.

RELATED ARTICLES

Latest News