ನವದೆಹಲಿ,ಜ.6- ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಸೂರ್ಯ ನಮಸ್ಕಾರ ಆದಿತ್ಯ ಎಲ್-1 ಉಪಗ್ರಹ ಇಂದು ಸಂಜೆ 4 ಗಂಟೆಗೆ ಲ್ಯಾಂಗ್ರೇಜಿಯನ್ ಬಿಂದು-1 ರ ಗುರಿ ತಲುಪುವ ಮೂಲಕ ಇತಿಹಾಸ ನಿರ್ಮಾಣವಾಗುವ ನಿರೀಕ್ಷೆಗಳಿವೆ. ಕಳೆದ ಸೆ.2 ರಂದು ಪಿಎಸ್‍ಎಲ್‍ವಿ ರಾಕೆಟ್‍ನೊಂದಿಗೆ ಉಡಾವಣೆಗೊಂಡಿದ್ದ ಆದಿತ್ಯ ಎಲ್-1 ಸೂರ್ಯ ಅಧ್ಯಯನದ ವೈಜ್ಞಾನಿಕ ಉಪಗ್ರಹ ಈವರೆಗೂ 15 ಲಕ್ಷ ಕಿ.ಮೀ. ದೂರ ಪ್ರಯಾಣಿಸಿ ಅಂತಿಮವಾಗಿ ತನ್ನ ಗಮ್ಯ ತಲುಪುವ ಕ್ಷಣಗಳಿಗಾಗಿ ವಿಶ್ವಾದ್ಯಂತ ಕಾತುರದ ಕ್ಷಣಗಳು ಎದುರಾಗಿವೆ.
ಆದಿತ್ಯ ಎಲ್-1 ಗುರಿ ತಲುಪುವ ಬಗ್ಗೆ ಇಸ್ರೊ ಸಂಸ್ಥೆ ಅಧಿಕೃತವಾಗಿ ಇನ್ನೂ ಯಾವುದೇ ಪ್ರಕಟಣೆ ನೀಡಿಲ್ಲ. ಆದರೆ ಬಾಹ್ಯಾಕಾಶ ವಿಚಾರಗಳ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡುವ ಇಸ್ರೊ ಇನ್ಸೈಟ್ ಎಂಬ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಆದಿತ್ಯ ಎಲ್-1 ಬಗ್ಗೆ ಮಾಹಿತಿ ಪ್ರಕಟಿಸಲಾಗಿದೆ. ನಾನು ಆಲೊಆರ್ಬಿಟ್‍ನತ್ತ ಹೋಗುತ್ತಿದ್ದೇನೆ. ನೀವು ಕೇಳಿದ್ದು ನಿಜ. ಸಂಜೆ 4 ಗಂಟೆಗೆ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಲ್ಯಾಂಗ್ರೇಜಿಯನ್ ಬಿಂದುವಿನಲ್ಲಿ ಪ್ರತಿಷ್ಠಾಪನೆಯಾಗಲಿದೆ. ಇದಕ್ಕಾಗಿ ಇಸ್ರೊ ಅಂತಿಮ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ತಿಳಿಸಲಾಗಿದೆ.
ಆದಿತ್ಯ ಎಲ್-1 ಇಸ್ರೊದ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಗಗನಯಾನವಾಗಿದೆ. 7 ವೈಜ್ಞಾನಿಕ ಪ್ಲೇ ಲೋಡ್‍ಗಳನ್ನ ಒಳಗೊಂಡಿರುವ ಉಪಗ್ರಹ ಸೂರ್ಯನ ಪ್ರಭಾಗೋಲ (ಫೋಟೋಸ್ಪೇರ್), ವರ್ಣಗೋಲ (ಕ್ರೋಮಾಸ್ಪೇರ್) ಸೂರ್ಯನ ಹೊರ ಮೇಲ್ಮೈ ಅನ್ನು ಅಧ್ಯಯನ ನಡೆಸಲಿದೆ. ಲಕ್ಷಾಂತರ ಕಿ.ಮೀ. ದೂರದಲ್ಲಿರುವ ಎಲ್-1 ಬಿಂದು ಸೂರ್ಯನ ನಿರಂತರ ಅಧ್ಯಯನಕ್ಕೆ ಸೂಕ್ತ ತಾಣವಾಗಿದೆ. ಗ್ರಹಣ ಸೂರ್ಯಾಸ್ತ ಮುಕ್ತ ಬಿಂದುವಿನಲ್ಲಿ ಪ್ರತಿಷ್ಠಾಪನೆಗೊಳ್ಳುವ ಆದಿತ್ಯ ಎಲ್-1 ವರ್ಷಪೂರ್ತಿ ಮತ್ತು ದಿನದ 24 ಗಂಟೆ ಕಾಲ ಸೂರ್ಯ ಅಧ್ಯಯನ ನಡೆಸಲಿದೆ.
ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ : ಸಿಎಂ ಸಿದ್ದರಾಮಯ್ಯ
ಇದರಿಂದಾಗಿ ಈವರೆಗೂ ವಿಶ್ವದ ಯಾವುದೇ ದೇಶದ ವಿಜ್ಞಾನಿಗಳು ಸಾಸದ ಯಶಸ್ಸನ್ನು ಭಾರತೀಯ ವಿಜ್ಞಾನಿಗಳು ಸಾಕಾರಗೊಳಿಸುವ ನಿರೀಕ್ಷೆಗಳಿವೆ. ಈವರೆಗಿನ ಮಾಹಿತಿ ಪ್ರಕಾರ ಪ್ರತಿ 11 ವರ್ಷಕ್ಕೊಮ್ಮೆ ಸೂರ್ಯನಲ್ಲಿನ ಚಟುವಟಿಕೆಗಳು ಬಿರುಸು ಪಡೆದುಕೊಳ್ಳಲಿವೆ. ಬೆಂಕಿಯ ಉಂಡೆಯಾಗಿರುವ ಸೂರ್ಯನಿಂದ ಈ ವೇಳೆ ಕಣ ಪ್ರವಾಹ, ವಿಕಿರಣಗಳು, ಸೌರ ಜ್ವಾಲೆಗಳು ಚಿಮ್ಮಲಿವೆ. ಅವುಗಳ ಪರಿಣಾಮ ಭೂಮಿಯ ಮೇಲ್ಮೈಯನ್ನು ಸುತ್ತುವರೆದಿರುವ ಕಾಂತೀಯ ಕ್ಷೇತ್ರಗಳ ಮೇಲಾಗಲಿದೆ.
ಆರೋಗ್ಯದಲ್ಲಿ ಏರುಪೇರು, ಹವಾಮಾನ ಬದಲಾವಣೆ, ಇಂಟರ್‍ನೆಟ್ ಸೇರಿದಂತೆ ಹಲವು ಸಂಪರ್ಕ ವ್ಯವಸ್ಥೆಗಳಿಗೆ ಅಡಚಣೆ, ವಿದ್ಯುತ್ ಸರಬರಾಜು ಮತ್ತು ಉತ್ಪಾದನಾ ಗ್ರಿಡ್‍ಗಳಿಗೆ ಹಾನಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಾಗಲಿವೆ. ಬಾಹ್ಯಾಕಾಶದಲ್ಲಿ ಪ್ರಯಾಣಿಸುವ ಗಗನಯಾತ್ರಿಗಳಿಗೂ ಇದರಿಂದ ತೊಂದರೆಯಾಗುವ ಸಾಧ್ಯತೆಯಿದೆ. ಸೂರ್ಯನಿಂದ ಯಾವ ಕ್ಷಣದಲ್ಲಿ ಸೌರಜ್ವಾಲೆ ಹೊರಹೊಮ್ಮಲಿದೆ, ಅದರ ತೀವ್ರತೆ ಎಷ್ಟು ಎಂಬ ಮಾಹಿತಿಯನ್ನು ಕರಾರುವಕ್ಕಾಗಿ ಪಡೆದುಕೊಂಡಿದ್ದಾದರೆ ಆಗಬಹುದಾದ ಅಪಾಯಗಳನ್ನು ತಪ್ಪಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಆದಿತ್ಯ ಎಲ್-1 ಸೂರ್ಯ ಶಿಕಾರಿ ಇಸ್ರೊದ ಜಾಗತಿಕ ಸಾಧನದ ಮೈಲಿಗಲ್ಲು ಎಂದೇ ಪರಿಭಾವಿಸಲಾಗಿದೆ.
ಸೂರ್ಯ ಶಿಕಾರಿಯಿಂದ ದೊರೆಯುವ ವೈಜ್ಞಾನಿಕ ದತ್ತಾಂಶಗಳನ್ನು ಭಾರತ ಇಡೀ ವಿಶ್ವದೊಂದಿಗೆ ಹಂಚಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಚಂದ್ರಯಾನ-1,2,3, ಮಂಗಳಯಾನ, ಮೆಗಾಟ್ರಾಫಿಕ್, ಅಸ್ಟ್ರೋಸ್ಯಾಟ್ ಸೇರಿದಂತೆ ಇನ್ನಿತರ ಯಾನಗಳು ಯಶಸ್ವಿಯಾಗಿವೆ. ಅವುಗಳ ಮೂಲಕ ರವಾನಿಸಲಾದ ವೈಜ್ಞಾನಿಕ ಉಪಕರಣಗಳಿಂದ ಲಭ್ಯವಾದ ದತ್ತಾಂಶವನ್ನು ಇಸ್ರೊ ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಹಂಚಿಕೊಂಡಿತ್ತು. ಇಂದು ಸಂಜೆ ಆದಿತ್ಯ ಎಲ್-1 ಲ್ಯಾಂಗ್ರೇಜಿಯನ್ ಗಮ್ಯ ತಲುಪುವ ಕಾರ್ಯಾಚರಣೆಯು ಯಶಸ್ವಿಯಾಗಲಿದೆ. ಅದರಿಂದ ದೊರೆಯುವ ಅಮೂಲ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.