ಬೆಂಗಳೂರು, ಮಾ.30- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಂಗ್ರಹ ಹಾಗೂ ಹಣ ವರ್ಗಾವಣೆ ಮೇಲೆ ಕಣ್ಣಿಟ್ಟಿರುವ ಐಟಿ ಅಧಿಕಾರಿಗಳು ರಾಜಧಾನಿ ಬೆಂಗಳೂರಿನ 20 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ.
ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳಿಗೆ ಬಿಲ್ಡರ್ಗಳು ಫಂಡಿಂಗ್ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ 20 ಕ್ಕೂ ಹೆಚ್ಚು ಬಿಲ್ಡರ್ಗಳ ಮನೆ ಹಾಗೂ ಕಚೇರಿಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕಳೆದ ವಾರವಷ್ಟೆ ಬೆಂಗಳೂರಿನ ಮೇಘನಾ ಫುಡ್ ಗ್ರೂಪ್ ಕಂಪನಿಗೆ ಸೇರಿದ 10 ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದು, ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೋರಮಂಗಲ, ಜಯನಗರ, ಇಂದಿರಾನಗರದಲ್ಲಿರುವ ಶಾಖೆಗಳ ಮೇಲೆ ದಾಳಿ ಮಾಡಲಾಗಿತ್ತು.
ಇಂದು ನಗರದ 20 ಕ್ಕೂ ಹೆಚ್ಚು ಬಿಲ್ಡರ್ಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಚುನಾವಣಾ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಕಳೆದ ವಾರವಷ್ಟೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಭರ್ಜರಿ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.